ಜಿಲ್ಲೆ

ಕಾರಿನ ಮೇಲೆ ಕಾಡಾನೆ ದಾಳಿ

ರಾಜಣ್ಣ

ಸಿದ್ದಾಪುರ: ಪಾಲಿಬೆಟ್ಟ ಬಳಿ ಕಾಡಾನೆಯೊಂದು ಚಲಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದು, ಕಾರಿನಲ್ಲಿದ್ದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಎಲಿಫೆಂಟ್ ಕಾರಿಡಾರ್ ತೋಟದ ಮಾಲೀಕ ಬಿದ್ದಂಡ ವಿಜು ಚೆಂಗಪ್ಪ, ಪತ್ನಿ ನಿಮ್ಮಿ ಹಾಗೂ ಇತರ ಇಬ್ಬರು ಪಾಲಿಬೆಟ್ಟದಿಂದ ಮಾರುತಿ ಕಾರಿನಲ್ಲಿ ತೋಟದ ಮನೆಗೆ ಬುಧವಾರ ಸಂಜೆ 7 ಗಂಟೆಯಲ್ಲಿ ಬರುತ್ತಿದ್ದರು. ಮುಖ್ಯರಸ್ತೆಯಿಂದ ಮನೆಯ ದಾರಿಗೆ ತಿರುಗುತ್ತಿದ್ದಂತೆಯೇ ತೋಟದೊಳಗಿನಿಂದ ಮರಿಯಾನೆಯೊಂದು ಅಡ್ಡ ಬಂದಿದೆ. ಜತೆಯಲ್ಲೇ ಬಂದಿದ್ದ ತಾಯಿ ಆನೆ ಕಾರಿನತ್ತ ನುಗ್ಗಿ ಸೊಂಡಿಲಿನಿಂದ ಬಡಿದಿದೆ.


ವಾಹನ ಚಾಲನೆ ಮಾಡುತ್ತಿದ್ದ ನಿಮ್ಮಿ ಅವರು ತಕ್ಷಣ ಕಾರನ್ನು ಹಿಮ್ಮುಖವಾಗಿ ಓಡಿಸಿದ್ದಾರೆ. ಆದರೆ, ಆನೆ ಅಟ್ಟಿಸಿಕೊಂಡು ಬಂದು ಕಾರಿನ ಬಾನೆಟ್‌ಗೆ ಬಡಿದು ಜಖಂಗೊಳಿಸಿದೆ. ಧೈರ್ಯಗುಂದದ ನಿಮ್ಮಿ ಅವರು ವೇಗವಾಗಿ, ಹಿಮ್ಮುಖವಾಗಿ ಕಾರನ್ನು ಚಲಾಯಿಸಿ ಮುಖ್ಯ ರಸ್ತೆ ತಲುಪಿದರು. ಕಾರು ದೂರವಾದಂತೆ ತೋಟದೊಳಗಿನ ದಾರಿಯಲ್ಲಿ ಮರಿಯೊಂದಿಗೆ ಆನೆ ಸಾಗಿ ಮರೆಯಾಗಿದೆ.