ಜಿಲ್ಲೆ

ಕರಡು ಮತದಾರರ ಪಟ್ಟಿ ಪ್ರಕಟ

ಕಲಬುರಗಿ: ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ೨೦೨೪ರ ಜ.೧ಕ್ಕೆ ಅನ್ವಯಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಫೌಜಿಯಾ ತರನ್ನುಮ್ ಶುಕ್ರವಾರ ಕರಡು ಮತದಾರರ ಪಟ್ಟಿ ಪ್ರಕಟಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಮುಖಂಡರೊAದಿಗೆ ಸಭೆ ನಡೆಸಿದ ಅವರು, ಅಫಜಲಪುರ, ಜೇವರ್ಗಿ, ಚಿತ್ತಾಪುರ, ಸೇಡಂ, ಚಿಂಚೋಳಿ, ಕಲಬುರಗಿ ಗ್ರಾಮೀಣ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ ಹಾಗೂ ಆಳಂದ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಮತ್ತು ಎಲ್ಲ ತಹಸಿಲ್ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಹೇಳಿದರು.

ಹೊಸದಾಗಿ ಹೆಸರು ಸೇರ್ಪಡೆಗೆ ನಮೂನೆ-೬, ಮತಪಟ್ಟಿಯಲ್ಲಿ ಹೆಸರಿದ್ದು ಸ್ಥಳಾಂತರ/ ಮೃತಪಟ್ಟಿದ್ದರೆ ಅವರ ಹೆಸರು ತೆಗೆಯಲು ನಮೂನೆ-೭, ತಿದ್ದುಪಡಿ, ವರ್ಗಾವಣೆಗೆ ನಮೂನೆ-೮ರಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬAಧಿಸಿದ ಮತಗಟ್ಟೆ ಅಧಿಕಾರಿ ಬಳಿ ಡಿ.೯ರವರೆಗೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿ ೨೦೨೪ರ ಜ.೫ರಂದು ಪ್ರಕಟಿಸಲಾಗುವುದು. ಕರಡು ಪಟ್ಟಿಯಲ್ಲಿ ಪುರುಷ ೧೧,೨೯,೪೭೨, ಮಹಿಳೆ ೧೧,೦೪,೮೦೮, ಇತರ ೩೨೯ ಸೇರಿ ೨೨,೩೪,೬೦೯ ಮತದಾರರು ಜಿಲ್ಲೆಯಲ್ಲಿದ್ದಾರೆ ಎಂದರು.

ರಾಜಕೀಯ ಪಕ್ಷದ ಅಧ್ಯಕ್ಷರು ಬೂತ್ ಮಟ್ಟದ ಏಜೆಂಟರನ್ನು ನೇಮಿಸಿ ಸಂಬಂಧಿಸಿದ ತಹಸೀಲ್ದಾರ್, ಮತದಾರರ ನೋಂದಣಾಧಿಕಾರಿ ಹಾಗೂ ಕಲಬುರಗಿ, ಸೇಡಂ ಸಹಾಯಕ ಆಯುಕ್ತರು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ಶಾಖೆಗೆ ಒಂದೊAದು ಪ್ರತಿ ಸಲ್ಲಿಸುವಂತೆ ಹೇಳಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಚುನಾವಣಾ ಶಾಖಾ ತಹಸೀಲ್ದಾರ್ ಪಂಪಯ್ಯ ಇತರರಿದ್ದರು.