ಜಿಲ್ಲೆ

ಕರಡಿ ದಾಳಿಗೆ ದಿನಗೂಲಿ ನೌಕರರಿಬ್ಬರಿಗೆ ಗಾಯ

ಹನಗೋಡು: ಗಸ್ತಿನಲ್ಲಿದ್ದ ವೇಳೆ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ.

ದಿನಗೂಲಿ ನೌಕರರಾದ ನೇಗತ್ತೂರಿನ ರಾಚಯ್ಯ ಹಾಗೂ ಕಲಬುರಗಿ ಜಿಲ್ಲೆಯ ಮಹಾಂತೇಶ್ ಗಾಯಗೊಂಡವರು. ರಾಚಯ್ಯ ಹಾಗೂ ಮಹಾಂತೇಶ್ ಅರಣ್ಯ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಬುಧವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಗಾಡಿಪಾಳ್ಯ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕರಡಿಯೊಂದು ಏಕಾಏಕಿ ದಾಳಿ ಮಾಡಿದೆ. ಸಿಬ್ಬಂದಿ ಚೀರಾಟದಿಂದ ಗಾಬರಿಗೊಂಡ ಕರಡಿ ಓಡಿಹೋಗಿದೆ. ದಾಳಿಯಿಂದ ಮಹಾಂತೇಶ್ ಹಾಗೂ ರಾಚಯ್ಯ ಅವರ ಕೈ -ಕಾಲು, ಹೊಟ್ಟೆ ಭಾಗಕ್ಕೆ ಗಾಯಗಳಾಗಿವೆ. ಇಬ್ಬರು ಹುಣಸೂರಿನ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಹುಣಸೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿಕಾಂತ್, ಆರ್‌ಎಫ್‌ಒ ಸುಬ್ರಹ್ಮಣ್ಯ, ಡಿಆರ್‌ಎಫ್ ಪ್ರಮೋದ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.