ಕಡೂರಿನಲ್ಲಿ ಪೌರಕಾರ್ಮಿಕರು ಹಾಗೂ ಪುರಸಭೆ ನೌಕರರಿಗೆ ಏರ್ಪಡಿಸಿದ್ದ ಕ್ರೀಡಾಕೂಟವನ್ನು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ತೋಟದಮನೆ ಮೋಹನ್‌ಕುಮಾರ್, ಈರುಳ್ಳಿ ರಮೇಶ್, ಕೆ.ಎಸ್.ಮಂಜುನಾಥ್, ಶ್ರೀನಿವಾಸ್‌ಮೂರ್ತಿ, ಶ್ರೇಯಸ್‌ಕುಮಾರ್ ಇತರರಿದ್ದರು. 
ಜಿಲ್ಲೆ

ಕ್ರೀಡೆಯಿಂದ ಪೌರಕಾರ್ಮಿಕರ ಆರೋಗ್ಯ ರಕ್ಷಣೆ

ಎಸ್.ಎನ್.ರವೀಂದ್ರ

ಕಡೂರು: ಪೌರಕಾರ್ಮಿಕರಿಂದ ಪಟ್ಟಣ ಸ್ವಚ್ಛವಾಗಿರುತ್ತದೆ. ಅವರು ಆರೋಗ್ಯವಾಗಿರಲು ಕ್ರೀಡೆ ಮುಖ್ಯವಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರು ಹಾಗೂ ಪುರಸಭೆ ನೌಕರರಿಗೆ ಮಂಗಳವಾರ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ಪಟ್ಟಣವನ್ನು ಸ್ವಚ್ಛವಾಗಿರಿಸಿ ಸುಂದರವಾಗಿರಿಸುವಲ್ಲಿ ಪೌರಕಾರ್ಮಿಕರು ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದರು.
ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಗೆಲುವು ಸಾಧಿಸಲು ಅಸಾಧ್ಯ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಪಟ್ಟಣದ ಅಭಿವೃದ್ಧ್ದಿಗೆ ಪೌರಕಾರ್ಮಿಕರು, ನೌಕರರು ಹಾಗೂ ಅಧಿಕಾರಿಗಳ ಪಾತ್ರ ಮುಖ್ಯವಾಗಿರಲಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ಕರೊನಾ ಸಂದರ್ಭದಲ್ಲಿ ಯಾವುದಕ್ಕೂ ಅಂಜದೆ ಪೌರಕಾರ್ಮಿಕರು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡು ಜನರಿಂದ ಪ್ರಶಂಸೆ ಗಳಿಸಿದರು ಎಂದರು.
ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್ ಮಾತನಾಡಿ, ಪೌರಕಾರ್ಮಿಕರಿಗಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯರಾದ ಈರುಳ್ಳಿ ರಮೇಶ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್‌ಮೂರ್ತಿ, ಮರಿಯಪ್ಪ, ಕೆ.ಟಿ.ಮಂಜುನಾಥ್, ಪುರಸಭೆ ಅಭಿಯಂತರರಾದ ಎಸ್.ಎಸ್.ಜಗದೀಶ್, ಸಿ.ಕೆ.ಶ್ರೇಯಸ್‌ಕುಮಾರ್, ಆರ್.ಪಿ.ಜಗದೀಶ್, ಪ್ರೇಮ್‌ಕುಮಾರ್, ತಿಮ್ಮಯ್ಯ, ಮುಖಂಡರಾದ ಡಿಶ್ ಮಂಜುನಾಥ್ ಹಾಗೂ ಪೌರಕಾರ್ಮಿಕರು ಇದ್ದರು.