ಜಿಲ್ಲೆ

ಕರಡಕೆರೆ - ಟಿಪ್ಪರ್ ಚಕ್ರಕ್ಕೆ ಸಿಲುಕಿ ರೈತ ಸಾವು

ಕೆ.ಎಂ.ದೊಡ್ಡಿ : ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಟಿಪ್ಪರ್ ಹಿಂಬದಿ ಚಕ್ರಕ್ಕೆ ಸಿಲುಕಿ ರೈತನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ಸಮೀಪದ ಕರಡಕೆರೆ ಗ್ರಾಮದಲ್ಲಿ ನಡೆದಿದೆ.

ಕರಡಕೆರೆ ರೈತ ಸಂಘದ ಕಾರ್ಯಕರ್ತ ನಿಂಗೇಗೌಡ (60) ಮೃತ ವ್ಯಕ್ತಿ. ಜಲ್ಲಿ ತುಂಬಿಕೊಂಡು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಟಿಪ್ಪರ್‌ನಿಂದ ಸಾಮಗ್ರಿ ತೆರವುಗೊಳಿಸುವ ವೇಳೆ ರಿವರ್ಸ್ ತೆಗೆಯುತ್ತಿದ್ದಾಗ ಸ್ಕೂಟರ್‌ನಲ್ಲಿ ಜಾನುವಾರು ಮೇವು ಇಳಿಸುತ್ತಿದ್ದ ನಿಂಗೇಗೌಡರ ಮೇಲೆ ಹಿಂಬದಿ ಚಕ್ರ ಹರಿದು ಸಾವು ಸಂಭವಿಸಿದೆ. ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಪರಿಹಾರ ನೀಡಲು ಆಗ್ರಹ:

ಚಾಲಕನ ನಿರ್ಲಕ್ಷ್ಯದಿಂದ ರೈತ ನಿಂಗೇಗೌಡ ಮೃತನಾಗಿದ್ದು, ಟಿಪ್ಪರ್ ಮಾಲೀಕ ಮತ್ತು ಕಾಮಗಾರಿ ಗುತ್ತಿಗೆದಾರ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ಶಿವಕುಮಾರ್, ವೆಂಕಟೇಗೌಡ ಸ್ಥಳಕ್ಕೆ ಆಗಮಿಸಿ ಗುತ್ತಿಗೆದಾರನ್ನು ಸ್ಥಳಕ್ಕೆ ಕರೆಸಿದರು. ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು ಪರಿಹಾರ ನೀಡುವುದಾಗಿ ಗ್ರಾಮಸ್ಥರ ಸಮ್ಮುಖ ಗುತ್ತಿಗೆದಾರ ಭರವಸೆ ನೀಡಿದ ನಂತರ ರಸ್ತೆಯಲ್ಲಿದ್ದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಅನುವು ಮಾಡಿಕೊಡಲಾಯಿತು. ರೈತ ಮುಖಂಡ ಕರಡಕೆರೆ ಹನುಮಂತೇಗೌಡ, ಸಬ್‌ಇನ್ಸ್‌ಪೆಕ್ಟರ್ ದೇವರಾಜು ಹಾಜರಿದ್ದರು. ಭಾರತೀನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.