ವಿಜಯವಾಣಿ ವಿಶೇಷ ಶಿರಸಿ: ನಗರ ವ್ಯಾಪ್ತಿಯಲ್ಲಿ ಅನಧಿಕೃತ ನಳ ಸಂಪರ್ಕದ ಜತೆ ಅಂತಹ ನಳಗಳಿಗೆ ವಿದ್ಯುತ್ ಪಂಪ್ ಜೋಡಣೆ ವಿಪರೀತವಾಗಿದೆ. ಇದರಿಂದಾಗಿ ಸಕ್ರಮವಾಗಿ ಸಂಪರ್ಕ ಪಡೆದುಕೊಂಡ ಸಾರ್ವಜನಿಕರು ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಅಭಾವ ಎದುರಿಸುವಂತಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವಿತರಣೆ ಪೈಪ್ಗಳಿಗೆ ಕೆಲವೆಡೆ ಸಾರ್ವಜನಿಕರು ಅನಧಿಕೃತ ಸಂಪರ್ಕ ಪಡೆದುಕೊಂಡಿದ್ದಾರೆ. ಅಲ್ಲದೆ, ಪೈಪ್ಗಳಿಗೆ ಪಂಪ್ ಅಳವಡಿಸಿಕೊಂಡು ನೀರನ್ನು ಬಳಸಿಕೊಳ್ಳುತ್ತಿದ್ದಾರೆ.
ಇಲ್ಲಿನ ಗಣೇಶನಗರ, ಮರಾಠಿಕೊಪ್ಪ, ಲಯನ್ಸ್ ನಗರ, ವಿದ್ಯಾನಗರ, ಕಸ್ತೂರಬಾನಗರ, ಕೋಟೆಕೆರೆ ಸುತ್ತಮುತ್ತ, ಶ್ರದ್ಧಾನಂದ ಗಲ್ಲಿ, ರಾಯರಪೇಟೆ ಸೇರಿ ಹಲವೆಡೆ ಇಂತಹ ಅನಧಿಕೃತ ನಳಗಳು ಹಾಗೂ ಪಂಪ್ ಅಳವಡಿಕೆ ನಡೆದಿದೆ. ಇದರಿಂದ ನಿಯಮಿತವಾಗಿ ನೀರಿನ ಕರ ನೀಡುವ ನಿವಾಸಿಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. ನಗರಸಭೆಯಿಂದ ನಿತ್ಯ ನೀರಿನ ಪೂರೈಕೆಯಾದರೂ ಸಮರ್ಪಕವಾಗಿ ಗ್ರಾಹಕರ ಮನೆಗೆ ತಲುಪುತ್ತಿಲ್ಲ. ವಿದ್ಯುತ್ ಚಾಲಿತ ಪಂಪ್ ಅಳವಡಿಕೆಯಿಂದ ಹಲವು ಮನೆಗಳ ನಳಗಳಲ್ಲಿ ನೀರಿಗಾಗಿ ಕಾದು ಕುಳಿತುಕೊಳ್ಳುವ ಸನ್ನಿವೇಶ ಎದುರಾಗಿದೆ.
1500ಕ್ಕೂ ಹೆಚ್ಚು ಅಕ್ರಮ: ನಗರ ವ್ಯಾಪ್ತಿಯಲ್ಲಿ 70 ಸಾವಿರ ಜನಸಂಖ್ಯೆ ಇದ್ದು, ಸದ್ಯ 11 ಸಾವಿರ ಅಧಿಕೃತ ನಳ ಸಂಪರ್ಕಗಳಿವೆ. ಇದರ ಜತೆಗೆ ಸಾವಿರದಿಂದ 1500ರವರೆಗೆ ಅಕ್ರಮ ನಳ ಸಂಪರ್ಕವಿದ್ದು, ನಿತ್ಯ ಲಕ್ಷಾಂತರ ಲೀಟರ್ ನೀರು ಅನಧಿಕೃತವಾಗಿ ಬಳಕೆಯಾಗುತ್ತಿದೆ. ನಳದ ಪೈಪ್ಲೈನ್ಗೆ ಪಂಪ್ ಅಳವಡಿಸಿರುವವರು 500ಕ್ಕೂ ಹೆಚ್ಚಿನ ಜನರಿದ್ದಾರೆ. ಕೇವಲ ಕುಡಿಯುವ ಉದ್ದೇಶಕ್ಕೆ ನೀಡುವ ನೀರನ್ನು ವಾಹನ ತೊಳೆಯಲು, ಮನೆ ಸ್ವಚ್ಛಗೊಳಿಸಲು, ಉದ್ಯಾನಕ್ಕೆ ನೀರು ನೀಡಲು ಯಥೇಸಚ್ಛವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಉಳಿದ ಜನರಿಗೆ ನೀರು ಬಳಕೆಗೆ ಸಿಗುತ್ತಿಲ್ಲ ಎಂಬುದು ನಗರಸಭೆ ಮೂಲಗಳ ಮಾಹಿತಿ.
ಕಠಿಣ ಕ್ರಮ ಅಗತ್ಯ: ನಗರಕ್ಕೆ ನೀರು ಪೂರೈಸಲು 15 ಕಿ.ಮೀ. ದೂರದ ಕೆಂಗ್ರೆ ಹಾಗೂ ಮಾರಿಗದ್ದೆ ಹೊಳೆಯಿಂದ ನೀರು ತರಲಾಗುತ್ತದೆ. ನಿತ್ಯ 50ರಿಂದ 60 ಲಕ್ಷ ಲೀಟರ್ ನೀರು ಅಗತ್ಯವಿದೆ. ಆದರೆ, ಬೇಸಿಗೆ ಆರಂಭವಾಗಲಿದ್ದು, ಜಲಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಲಿದೆ. ಪ್ರತಿ ವರ್ಷದಂತೆ 30 ಲಕ್ಷ ಲೀಟರ್ ನೀರು ಪೂರೈಕೆಯೂ ಕಷ್ಟವಾಗಲಿದೆ. ಮಾರ್ಚ್ ಆರಂಭದಲ್ಲಿ ಮಾರಿಕಾಂಬಾ ಜಾತ್ರೆ ಜರುಗಲಿದೆ. ಕಾರಣ ಅಕ್ರಮ ನಳಗಳು ಹಾಗೂ ಅನಧಿಕೃತ ಪಂಪ್ ಜೋಡಣೆಯ ಹಾವಳಿ ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಕಠಿಣ ಕ್ರಮಕ್ಕೆ ನಗರಾಡಳಿತ ಮುಂದಾಗಬೇಕಿದೆ.
ಅನಧಿಕೃತ ನಳ ಸಂಪರ್ಕ, ನಳಕ್ಕೆ ಅನಧಿಕೃತವಾಗಿ ಪಂಪ್ ಮೋಟಾರ್ ಅಳವಡಿಕೆ ಹಾಗೂ ನೀರನ್ನು ಅನಗತ್ಯವಾಗಿ ಪೋಲು ಮಾಡುತ್ತಿರುವವರ ಮೇಲೆ ಮುನ್ಸೂಚನೆ ನೀಡದೇ ಕಾರ್ಯಾಚರಣೆ ಕೈಗೊಳ್ಳುತ್ತೇವೆ. ದಂಡ ವಿಧಿಸುವ ಜತೆ ಅಂತಹ ವ್ಯಕ್ತಿಗಳಿಗೆ ಭವಿಷ್ಯದಲ್ಲಿ ನಳ ಸಂಪರ್ಕ ಕಡಿತಗೊಳಿಸುತ್ತೇವೆ. | ರಮೇಶ ನಾಯಕ ಪೌರಾಯುಕ್ತ ಶಿರಸಿ
ಹಲವು ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುವ ಸ್ಥಿತಿ ಎದುರಾಗುತ್ತಿದೆ. ಪ್ರಸಕ್ತ ವರ್ಷ ಮಾರಿಕಾಂಬಾ ಜಾತ್ರೆಯಿದ್ದು, ಹೆಚ್ಚಿನ ನೀರಿನ ಅಗತ್ಯವಿದೆ. ಪೌರಾಯುಕ್ತರು ಅಕ್ರಮ ನಳ ಸಂಪರ್ಕಗಳನ್ನು ಗುರುತಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಪಂಪ್ಸೆಟ್ಗಳನ್ನು ಸೀಜ್ ಮಾಡಿ ಹೆಚ್ಚಿನ ದಂಡ ವಿಧಿಸಬೇಕು. ಜತೆಗೆ ಅಕ್ರಮ ನಳ ಸಂಪರ್ಕ ತಡೆಹಿಡಿದು ಸಕ್ರಮವಾಗಿ ನಳ ಸಂಪರ್ಕ ಪಡೆಯುವಂತೆ ಜನರ ಮನವೊಲಿಸಬೇಕು. | ಪರಮಾನಂದ ಹೆಗಡೆ ಸಾಮಾಜಿಕ ಕಾರ್ಯಕರ್ತ