ಜಿಲ್ಲೆ

ಕಮಿಷನ್​ಗೆ ಕಡಿವಾಣ ಹಾಕಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ, ರೈತರ ಸಮಸ್ಯೆಗಳಿಗೆ ಶ್ರೀ ಪರಿಹಾರದ ಭರವಸೆ

ರಾಮನಗರ: ರೈತರ ಬದುಕು ಹಸನಾಗಲು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲು ಸಭೆ ಆಯೋಜಿಸಿದ್ದು, ರೈತರ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಶ್ರೀವಾಗಿ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್​ ಮೆನನ್​ ರಾಜೇಂದ್ರನ್​ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮಂಗಳವಾರ ನಡೆದ ರೈತರ ಕುಂದುಕೊರತೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಾಪ್​ಕಾಮ್ಸ್​ನಲ್ಲಿ ಪ್ರತಿ ಹತ್ತು ಬಾಕ್ಸ್​ಗಳಿಗೆ 2 ಬಾಕ್ಸ್​ ಉಚಿತವಾಗಿ ನೀಡುವಂತೆ ಹಾಗೂ ಎಪಿಎಂಸಿಯಲ್ಲಿ ಶೇ.10 ಕಮಿಷನ್​ ಪಡೆಯುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ ಇಲಾಖೆಯಿಂದ ತರಬೇತಿ ಪಡೆದಿರುವ ಫಲಾನುಭವಿಗಳಿಗೆ ಅವಶ್ಯವಿರುವ ಸಲಕರಣೆಗಳು ಹಾಗೂ ರಸಗೊಬ್ಬರ ವಿತರಿಸಬೇಕು. ರೈತರ ಬೆಳೆ ಹಾನಿ ಮತ್ತು ವನ್ಯ ಪ್ರಾಣಿಗಳಿಂದ ಜಾನುವಾರು ಪ್ರಾಣಹಾನಿ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ದೇಸಿ ಹಸುಗಳನ್ನು ಖರೀದಿಸಲು ಪ್ರೋತ್ಸಾಹಧನ ಮತ್ತು ವಿಮೆ ಮಾಡಿಸುವಂತೆ ರೈತರು ಮನವಿ ಸಲ್ಲಿಸಿದರು. ಪಶು ಚಿಕಿತ್ಸೆ ಕೇಂದ್ರಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಬೇಕು, ಪ್ರತಿ ತಿಂಗಳು ಪಶುವೈದ್ಯರು ಭೇಟಿ ನೀಡುವ ಸ್ಥಳಗಳ ಕುರಿತು ಪಶುಸಂಗೋಪನ ಇಲಾಖೆಯ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಹೈನುಗಾರಿಕೆಯು ಪ್ರಮುಖ ಉದ್ಯಮವಾಗಿದ್ದು ಒಂದು ಹಳ್ಳಿಯಲ್ಲಿ ಸುಮಾರು 500ರಿಂದ 1000 ಹಸುಗಳಿಗೆ ಒಬ್ಬ ಪಶುವೈದ್ಯರನ್ನು ನೇಮಿಸಿದ್ದು ಪ್ರತಿಹಳ್ಳಿಗೂ ಭೇಟಿ ನೀಡಿ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗಿಡಗಳಿಗೆ ನುಸಿರೋಗ ಸೇರಿ ಕೀಟ ಬಾಧೆ ಹೆಚ್ಚಾಗಿದ್ದು, ಅದರಿಂದ ಬೆಳೆ ಇಳುವರಿ ಕುಂಠಿತಕ್ಕೊಳಗಾಗಿದ್ದು, ರೋಗ ನಿಯಂತ್ರಣಕ್ಕೆ ಬಳಸುವ ರಾಸಾಯನಿಕ ಔಷಧದ ಬೆಲೆ ಹೆಚ್ಚಾಗಿದೆ. ರೋಗ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಲು ಹೆಚ್ಚು ಒತ್ತು ನೀಡುವಂತೆ ತಿಳಿಸಿದರು. ಲೀಡ್​ ಬ್ಯಾಂಕಿನ ಅಧಿಕಾರಿಗಳು ರೈತರ ಮನವಿಗಳಿಗೆ ಸ್ಪಂದಿಸುವಂತೆ ಡಾ. ಅವಿನಾಶ್​ ಮೆನನ್​ ರಾಜೇಂದ್ರನ್​ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ತಹಸೀಲ್ದಾರ್​ ಎಂ. ವಿಜಯಕುಮಾರ್​, ರೈತ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಚಿಕ್ಕಬೈರೇಗೌಡ, ಮಾರೇಗೌಡ ಹಾಗೂ ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.