ಹಾಸನ: ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಪರಭಾಷಾ ನಟ ಕಮಲ್ ಹಾಸನ್ ನಿಲುವು ಖಂಡಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ಪ್ರದರ್ಶನ ಮಾಡಬಾರದು. ಹಿರಿಯ ನಟರಾದರೂ ಕನ್ನಡ ಭಾಷೆಯ ಪ್ರಾಚೀನತೆ, ಶ್ರೀಮಂತಿಕೆ ಅರಿಯದೆ ಇರುವುದು ದುರದೃಷ್ಟಕರ. ಅವಿವೇಕದ ಹೇಳಿಕೆ ನೀಡಿಯೂ, ಕ್ಷಮೆಯಾಚಿಸಲು ಭಂಡತನ ತೋರುತ್ತಿರುವ ಬಹುಭಾಷಾ ನಟನ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಕನ್ನಡ ವಿರೋಧಿ ಹೇಳಿಕೆ ನೀಡಿರುವ ನಟನ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವಕಾಶ ಕೊಡಬಾರದು, ಬ್ಯಾನ್ ಮಾಡುವ ನಿರ್ಧಾರವನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ನಾವೇ ತಡೆಯುವ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಸಿ, ಕಮಲ್‌ಹಾಸನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ನಟನ ಪ್ರತಿಕೃತಿ ದಹಿಸಲು ಮುಂದಾದರು. ಪ್ರತಿಕೃತಿಗೆ ಪೆಟ್ರೋಲ್ ಸುರಿಯುತ್ತಿದ್ದಂತೆಯೇ ಅಲ್ಲೇ ಇದ್ದ ನಗರ ಠಾಣೆ ಇನ್ಸ್‌ಪೆಕ್ಟರ್ ಮೋಹನ್ ಕೃಷ್ಣ, ಪಿಎಸ್‌ಐ ಎಂ.ಕುಮಾರ್ ಹಾಗೂ ಸಿಬ್ಬಂದಿ ಪ್ರತಿಕೃತಿ ದಹಿಸಲು ಅವಕಾಶ ನೀಡಲಿಲ್ಲ.
ಪ್ರತಿಭಟನೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ಶಿವ ಹಾಗೂ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.