ಜಿಲ್ಲೆ

ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ

ಮೈಸೂರು: ಕನ್ನಡವು ತಮಿಳಿನಿಂದ ಹುಟ್ಟಿರುವ ಭಾಷೆ ಎಂದು ಹೇಳಿಕೆ ನೀಡಿರುವ ಚಿತ್ರನಟ ಕಮಲ್ ಹಾಸನ್ ವಿರುದ್ಧ ಕರ್ನಾಟಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಡಿ.ದೇವರಾಜ ಅರಸು ರಸ್ತೆಯಲ್ಲಿ ಕಮಲ್ ಅವರ ಭಾವಚಿತ್ರಕ್ಕೆ ಮಸಿ ಬಳಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಮಲ್ ಅವರು ಕೂಡಲೇ ಕನ್ನಡ ಭಾಷೆಗೆ ಅವಮಾನ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಕಮಲ್ ಹಾಸನ್ ಅನೇಕ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ಆದರೆ ಅವರ ಹೇಳಿಕೆಯಿಂದ ಕನ್ನಡಿಗರಿಗೆ ಬೇಸರವಾಗಿದೆ. ಕನ್ನಡಿಗರು ಹಾಗೂ ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು.

ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಕಮಲ್ ಅವರು ರಾಜ್ಯಕ್ಕೆ ಬಂದು ಈ ರೀತಿಯ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ರೊಚ್ಚಿಗೇಳುವಂತೆ ಮಾಡಿದ್ದಾರೆ. ನಾಡು-ನುಡಿಗೆ ಹೆಸರಾದ ಕರ್ನಾಟಕ, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಈ ಮೂಲಕ ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಸ್ವಾತಂತ್ರೃ ಲಿಪಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ ಭಾಷೆಯಾಗಿದೆ.

ಕೋಟ್ಯಂತರ ಕರುನಾಡಿಗರ ಜೀವನಾಡಿಯಾಗಿರುವ ಹೆಮ್ಮೆಯ ಕನ್ನಡ ಭಾಷೆಗೆ ಅವರು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಬೇಕು. ಇಲ್ಲವಾದರೆ ಅವರ ಚಿತ್ರಗಳನ್ನು ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು.

ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಮುಡಾ ಮಾಜಿ ಸದಸ್ಯ ನವೀನ್ ಕುಮಾರ್, ಮಂಜುನಾಥ್, ರವಿಕುಮಾರ್, ಸಂಗಮ್, ಉಮೇಶ್, ರವಿಚಂದ್ರ, ಪ್ರಶಾಂತ್, ನಿತಿನ್, ಹರೀಶ್ ಗೌಡ, ರವಿ ಇ ತರರಿದ್ದರು.