ದಕ್ಷಿಣ ಕರ್ನಾಟಕ ಕಬ್ಬು ಸಾಗಾಣಿಕೆ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಹಾಗೂ ಶ್ರೀ ಲಕ್ಷ್ಮೀನಾರಾಯಣ ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದಿಂದ ಪಿಎಸ್‌ಎಸ್‌ಕೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು. 
ಜಿಲ್ಲೆ

ಕಬ್ಬು ಸಾಗಣೆದಾರರ ಸಂಘದ ಪ್ರತಿಭಟನೆ

ಪಾಂಡವಪುರ: ಕಬ್ಬು ಸಾಗಣೆಗೆ ಸರ್ಕಾರ ನಿಗದಿ ಮಾಡಿರುವ ಬಾಡಿಗೆ ವೆಚ್ಚ ಪಾವತಿಸಲು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳು ವಿಫಲವಾಗಿವೆ ಎಂದು ಆರೋಪಿಸಿ ದಕ್ಷಿಣ ಕರ್ನಾಟಕ ಕಬ್ಬು ಸಾಗಾಣಿಕೆ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಹಾಗೂ ಶ್ರೀ ಲಕ್ಷ್ಮೀನಾರಾಯಣ ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರ ಸಂಘದಿಂದ ಪಿಎಸ್‌ಎಸ್‌ಕೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು.


ಸಂಘಟನೆ ತಾಲೂಕು ಅಧ್ಯಕ್ಷ ಕೆನ್ನಾಳು ವೇಣಿಗೋಪಾಲ್ ನೇತೃತ್ವದಲ್ಲಿ ಕಾರ್ಖಾನೆ ಮುಂಭಾಗ ಜಮಾವಣೆಗೊಂಡ ಸಂಘಟನೆಗಳ ಕಾರ್ಯಕರ್ತರು ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೇಣುಗೋಪಾಲ್ ಮಾತನಾಡಿ, ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ಕಬ್ಬು ಅಭಿವೃದ್ಧಿ ಹಾಗೂ ನಿರ್ದೇಶನಾಲಯದ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಲಿಖಿತ ಆದೇಶ ನೀಡಿದ್ದರೂ, ಪಾಲನೆ ಮಾಡುತ್ತಿಲ್ಲ. ಇದರಿಂದ ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರು ನಷ್ಟದಲ್ಲಿ ಕಬ್ಬು ಸರಬರಾಜು ಮಾಡಬೇಕಾದ ಪರಿಸ್ಥಿತಿ ಇದೆ. ನಾವು ಹೆಚ್ಚಿನ ಬಾಡಿಗೆಗೆ ಒತ್ತಾಯಿಸುತ್ತಿಲ್ಲ. ಸರ್ಕಾರ ಹಲವು ಮಾನದಂಡಗಳ ಮೇಲೆ ನಿಗದಿ ಮಾಡಿರುವ ಬಾಡಿಗೆ ಕೇಳುತ್ತಿದ್ದೇವೆ. ಇದಕ್ಕೆ ಕಾರ್ಖಾನೆ ಆಡಳಿತ ಮಂಡಳಿ ಸ್ಪಂದಿಸದೆ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.


ಈ ಭಾಗದ ಕೊಪ್ಪ ಶುಗರ್ಸ್‌, ಐಸಿಎಲ್, ಹೇಮಾವತಿ, ಪಿಎಸ್‌ಎಸ್‌ಕೆ, ಕೆ.ಎಂ.ದೊಡ್ಡಿಯ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರ ಹಿತ ಕಾಯಬೇಕು. ನಮ್ಮ ಹೋರಾಟ ಸರ್ಕಾರ, ಜಿಲ್ಲಾಡಳಿತ ಅಥವಾ ಕಾರ್ಖಾನೆ ಮಾಲೀಕರ ವಿರುದ್ಧ ಅಲ್ಲ. ಆದರೆ ಕಾರ್ಖಾನೆಗಳ ಮಾಲೀಕರು, ರೈತರು ಮತ್ತು ಲಾರಿ ಮಾಲೀಕರನ್ನು ಶೋಷಣೆ ಮಾಡುತ್ತಿದ್ದಾರೆ. ಕಬ್ಬು ಕಟಾವು ದರ ದಿನೇ ದಿನೇ ಹೆಚ್ಚಳವಾಗುತ್ತಿದೆ. ಆದರೆ ಸಾಗಣೆ ದರ ಮಾತ್ರ ಹಾಗೆಯೇ ಇದೆ ಎಂದು ದೂರಿದರು.
ಸಂಘಟನೆಯ ಉಪಾಧ್ಯಕ್ಷ ತಮ್ಮಣ್ಣ, ಕಾರ್ಯದರ್ಶಿ ಸೂರ್ಯಪ್ರಕಾಶ್, ಟ್ರ್ಯಾಕ್ಟರ್ ಮಾಲೀಕರ ಸಂಘದ ಅಧ್ಯಕ್ಷ ರವಿ, ಕಾರ್ಯದರ್ಶಿ ವಿಜಯಕುಮಾರ್, ನವೀನ್, ಮಹೇಶ್ ಇತರರು ಇದ್ದರು.