ಬಾಗಲಕೋಟೆ: ಜಿಲ್ಲೆಯ ರೈತ ಮುಖಂಡರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಭರವಸೆಯಂತೆ ಭಾನುವಾರ ಸಹಕಾರ ಸಪ್ತಾಹ ಕಾರ್ಯಕ್ರಮದ ಬಳಿಕ ತೋಟಗಾರಿಕೆ ವಿವಿಯಲ್ಲಿ ಮುಖ್ಯಮಂತ್ರಿಗಳ ಜೊತೆಗೆ ರೈತ ಮುಖಂಡರ ಸಭೆ ನಡೆಯಿತು.
ಸಭೆಯಲ್ಲಿ ಟನ್ ಕಬ್ಬಿಗೆ ಕಾರ್ಖಾನೆಗಳು ೩೦೦೦ ರೂ. ಬೆಲೆ ನಿಗದಿ ಪಡಿಸಿದ್ದು, ಇದು ಸಾಲದು. ಟನ್ ಗೆ ೩೫೦೦ ರೂ. ನಿಗದಿ ಪಡಿಸುವಂತೆ ರೈತ ಮುಖಂಡರು ಸಿಎಂ ಗಮನಕ್ಕೆ ತಂದರು.
ರೈತರ ಬೇಡಿಕೆ ಆಲಿಸಿದ ಸಿಎಂ, ಬಳಿಕ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಈ ಬಗ್ಗೆ ನಾಲ್ಕÊೆದು ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳು ಹಾಗೂ ರೈತರ ಸಭೆ ನಡೆಸುವಂತೆ ಸೂಚನೆ ನೀಡಿ, ಈ ಬಗ್ಗೆ ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಹಲವು ದಿನಗಳಿಂದಲೂ ರೈತ ಮುಖಂಡರು ಇದೇ ಬೇಡಿಕೆಯನ್ನು ಇಟ್ಟಿದ್ದರು. ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತ ಮುಖಂಡರು, ಕಬ್ಬು ಬೆಳೆಗಾರರು, ಕಾರ್ಖಾನೆ ಮಾಲೀಕರ ಜಂಟಿ ಸಭೆ ನಡೆಸಿ, ಸಮಸ್ಯೆ ಇತ್ಯರ್ಥ ಪಡಿಸುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದರು. ಆದರೆ, ಈ ವರೆಗೂ ಅಂತ ಸಭೆಗಳು ನಡೆದಿರಲಿಲ್ಲ. ಇದೀಗ ಸಿಎಂ ಸೂಚನೆಗೆ ಸಭೆ ನಡೆಸಲು ಸಚಿವರು ಒಪ್ಪಿದ್ದಾರೆ.
ಸಚಿವರು ಸಭೆ ನಡೆಸುವ ಬಗ್ಗೆ ಹೇಳಿದ್ದರಿಂದ ರೈತರು ತಾತ್ಕಾಲಿಕವಾಗಿ ತಮ್ಮ ಹೋರಾಟವನ್ನು ಹಿಂಪಡೆಯುತ್ತೇವೆ. ಸಿಎಂ ಹೇಳಿದಂತೆ ನಾಲ್ಕು ದಿನಗಳ ವರೆಗೂ ಕಾಯ್ದು ನೋಡುತ್ತೇವೆ ಎಂದು ರೈತ ಮುಖಂಡ ಮುತ್ತಪ್ಪ ಕೋಮಾರ ತಿಳಿಸಿದ್ದಾರೆ.
ಸಭೆಯಲ್ಲಿ ರೈತ ಮುಖಂಡರಾದ ಮುತ್ತಪ್ಪ ಕೋಮಾರ, ಸುಭಾಸ್ ಶಿರಬೂರ, ಶ್ರೀಶೈಲ ನಾಯಕ, ನಾಗೇಶ ಗೋಲಶೆಟ್ಟಿ, ಈರಪ್ಪ ಹಂಚಿನಾಳ, ಗೋವಿಂದಪ್ಪ ಮೆಟಗುಡ್ಡ, ಬಸಪ್ಪ ಸಂಗಣ್ಣವರ, ಬಸವರಾಜ್ ಗೋನಾಳ, ಶಿವನಗೌಡ ಪಾಟೀಲ, ಗಂಗಪ್ಪ ಮಾದರ, ರಾಜೇಂದ್ರ ಪಾಟೀಲ ಮತ್ತಿತರರು ಇದ್ದರು.