ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಗುತ್ತಿಗೆದಾರರಾದ ಎಂಆರ್‌ಎನ್ ಸಂಸ್ಥೆ ರೈತರು ಮತ್ತು ಸಾರ್ವಜನಿಕರ ಸಹಕಾರದಿಂದ ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ಅರೆದಿದೆ ಎಂದು ಸಂಸ್ಥೆಯ ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕ ರವಿ ತಿಳಿಸಿದರು.
ಪ್ರಸಕ್ತ ಹಂಗಾಮಿನಲ್ಲಿ ಪ್ರತಿದಿನ 3.5 ಸಾವಿರ ಟನ್ ಕಬ್ಬು ನುರಿಸಲಾಗುತ್ತಿದ್ದು, ಕಾರ್ಖಾನೆ ವ್ಯಾಪ್ತಿಯಲ್ಲಿ ಇನ್ನೂ 1.5 ರಿಂದ 2 ಲಕ್ಷ ಟನ್ ಕಬ್ಬು ಲಭ್ಯತೆ ಇದ್ದು, ಅದಕ್ಕಿಂತಲೂ ಹೆಚ್ಚಿನ ಕಬ್ಬು ಲಭ್ಯವಾದರೂ ಫೆಬ್ರವರಿ ತಿಂಗಳ ಕೊನೆಯವರೆಗೂ ನಿರಂತರವಾಗಿ ಅರೆಯಲಾಗುವುದು. ಕಬ್ಬು ಕಟಾವು ಮಾಡುವ ಕಾರ್ಮಿಕರ ಕೊರತೆಯಿಂದ 4 ಸಾವಿರ ಟನ್ ಅರೆಯುವಿಕೆ ಸಾಮರ್ಥ್ಯವಿದ್ದರೂ ಕಡಿಮೆ ಪ್ರಮಾಣದಲ್ಲಿ ಕಬ್ಬು ಅರೆಯಲಾಗಿದೆ. ಮುಂದಿನ ಹಂಗಾಮಿನಲ್ಲಿ ಕಾರ್ಮಿಕರ ಸಮಸ್ಯೆ ಸರಿಪಡಿಸಿಕೊಂಡು ಪ್ರತಿದಿನ 5 ಸಾವಿರ ಟನ್‌ವರೆಗೂ ಕಬ್ಬು ಅರೆಯಲು ಕ್ರಮ ವಹಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸಕ್ತ ಹಂಗಾಮಿನ ನವೆಂಬರ್ ಅಂತ್ಯದವರೆಗೆ ರೈತರು ಸರಬರಾಜು ಮಾಡಿರುವ 3.89 ಲಕ್ಷ ಟನ್ ಕಬ್ಬಿಗೆ ಸಕಾಲದಲ್ಲಿ ಬಟವಾಡೆ ಮಾಡಲಾಗಿದ್ದು, ಈವರೆಗೂ 107.17 ಕೋಟಿ ರೂ. ಬಟವಾಡೆ ಮಾಡಲಾಗಿದೆ. ರೈತರಿಗೆ ಆರ್ಥಿಕ ತೊಂದರೆಯಾಗದಂತೆ ಸರಬರಾಜು ಮಾಡಿದ ಕಬ್ಬಿಗೆ ಪ್ರತಿ ವಾರ ಬಟವಾಡೆ ಮಾಡಲು ಸಂಸ್ಥೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಅಪಘಾತ ನಿಧಿ ಸ್ಥಾಪನೆ: ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವಾಗ ಎತ್ತು ಮತ್ತು ಎತ್ತಿನಗಾಡಿ ಹೊಡೆಯುವ ವ್ಯಕ್ತಿ ಅಪಘಾತಕ್ಕೀಡಾಗಿ ಸಾವು-ನೋವು ಸಂಭವಿಸಿದರೆ ಹಾಗೂ ಕಬ್ಬು ಕಟಾವು ಮಾಡುವು ಕಾರ್ಮಿಕರು ಹೆಜ್ಜೇನು ದಾಳಿ ಮತ್ತು ಹಾವು ಕಡಿತಕ್ಕೊಳಕ್ಕಾಗಿ ಮೃತಪಟ್ಟರೆ ಪರಿಹಾರ ನೀಡುವುದಕ್ಕಾಗಿ ಅಪಘಾತ ನಿಧಿ ಸ್ಥಾಪಿಸಲಾಗಿದೆ. ಇದ್ಕಕ್ಕಾಗಿ ಪ್ರತಿ ಟನ್ ಕಬ್ಬಿಗೆ ರೈತರಿಂದ ಒಂದು ರೂ. ಹಾಗೂ ಕಾರ್ಮಿಕರಿಂದ ಎರಡು 2 ರೂ. ಪಡೆಯಲಾಗುತ್ತಿದೆ. ಇದಕ್ಕೆ ಕಂಪನಿ ತನ್ನ ಪಾಲನ್ನು ಸೇರಿಸಿ ಪರಿಹಾರ ವಿತರಿಸುತ್ತದೆ. ಈಗಾಗಲೇ 12 ಫಲಾನುಭವಿಗಳಿಗೆ 2.58 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂಆರ್‌ಎನ್ ಸಂಸ್ಥೆಯ ಯೂನಿಟ್ ಮುಖ್ಯಸ್ಥ ಶಿವಾನಂದ ಯರಗಟ್ಟಿ, ಟ್ರಾನ್ಸ್‌ಪೋರ್ಟ್ ಮುಖ್ಯಸ್ಥ ಸತೀಶ್ ಇದ್ದರು.