ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಕಬ್ಬು ಬೆಳೆಗಾರರ ಕುಂದು ಕೊರತೆ ಸಭೆಯಲ್ಲಿ ರೈತರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತದ ವೈಫಲ್ಯ ಮತ್ತು ರೈತರಿಗಾಗುತ್ತಿರುವ ಅನ್ಯಾಯದ ಬಗ್ಗೆ ಗಮನ ಸೆಳೆದರು. 
ಜಿಲ್ಲೆ

ಕಬ್ಬು ದರ ನಿಗದಿಯಾಗದೆ ಸಂಕಷ್ಟ

ಕೊಳ್ಳೇಗಾಲ: ಸಕಾಲಕ್ಕೆ ಆಗದ ಕಬ್ಬು ಕಟಾವು, ನಾನ್ ಅಗ್ರಿಮೆಂಟ್ ದರದಲ್ಲಿ ಅವ್ಯವಹಾರ, ಕಬ್ಬಿಗೆ ಸೂಕ್ತ ಬೆಲೆನೀಡದಿರುವುದು, ತೂಕದ ಮಾಪನದ ಸಮಸ್ಯೆ ಇನ್ನಿತರ ಅಹವಾಲುಗಳನ್ನು ಜಿಲ್ಲಾಧಿಕಾರಿ ಬಳಿ ರೈತರು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಕಬ್ಬು ಬೆಳೆಗಾರರ ಕುಂದು ಕೊರತೆ ಸಭೆಯಲ್ಲಿ ರೈತರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತದ ವೈಫಲ್ಯ ಮತ್ತು ರೈತರಿಗಾಗುತ್ತಿರುವ ಅನ್ಯಾಯದ ಬಗ್ಗೆ ಗಮನ ಸೆಳೆದರು.
ರೈತರು ಬೆಳೆದ ಕಬ್ಬಿಗೆ 2,500 ಸಾವಿರ ರೂ.ದರವನ್ನು ಮುಂಗಡ ಹಣ ಎಂದು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ನೀಡುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕಳೆದ ಬಾರಿ 2995 ರೂ. ನೀಡಿದ್ದ್ದರು. ಆದರೀಗ ಕಡಿಮೆ ದರ ನಿಗದಿ ಮಾಡಿದ್ದಾರೆ ಎಂದು ದೂರಿದರು. ಈ ಬಗ್ಗೆ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ಹಾಗೂ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಮಹಾದೇವಪ್ಪ ಪ್ರತಿಕ್ರಿಯಿಸಿ, ಸರ್ಕಾರದಿಂದ ಕಬ್ಬಿಗೆ ಬೆಲೆ ನಿಗದಿಯಾಗಿಲ್ಲ. ಬಂದ ನಂತರ ಉಳಿದ ಹಣವನ್ನು ರೈತರಿಗೆ ಪಾವತಿಸಲಾಗುತ್ತದೆ ಎಂದು ತಿಳಿಸಿದರು. ಈ ಮಧ್ಯಪ್ರವೇಶಿಸಿದ ರೈತ ಮುಖಂಡ ಬಸವರಾಜು, ಭಾಗ್ಯರಾಜು ಕಳೆದ ವಷರ್ವೂ ಸರ್ಕಾರದಿಂದ ತಡವಾಗಿಯೇ ಬೆಲೆ ನಿಗದಿಯಾಗಿತ್ತು. ಹಾಗಿದ್ದರೂ ನೀವು 2995 ರೂ. ನೀಡಿದ್ದಿರಿ. ಅದರಂತೆ ಈ ವಷರ್ವೂ ನೀಡಿ ಎಂದು ಒತ್ತಾಯಿಸಿದರು.

ಬೇರೆ ಜಿಲ್ಲೆಯ ಕಬ್ಬಿಗೆ ಆದ್ಯತೆ: ಮಂಡ್ಯ, ಮದ್ದೂರು ಇನ್ನಿತರ ಕಡೆಗಳಿಂದ ಬರುವ ಕಬ್ಬಿಗೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆದ್ಯತೆ ನೀಡುತ್ತಿದೆ. ನಮ್ಮ ಜಿಲ್ಲೆಯ ರೈತರಿಂದ ಅಗ್ರಿಮೆಂಟ್ ಮಾಡಿಸಿಕೊಂಡು ಕಡಿಮೆ ಬೆಲೆಗೆ ಕಬ್ಬು ಸಿಗುತ್ತದೆ ಎಂಬ ಕಾರಣಕ್ಕೆ ಬೇರೆ ಜಿಲ್ಲೆಯಿಂದ ಕಬ್ಬು ತರಿಸಿಕೊಳ್ಳುತ್ತಿದ್ದಾರೆ. ಇದ್ದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಸಕಾಲಕ್ಕೆ ಕಬ್ಬು ಕಟಾವು ಆಗುತ್ತಿಲ್ಲ ಎಂದು ಕಬ್ಬು ಬೆಳೆಗಾರ ಭಾಗ್ಯರಾಜು ಆರೋಪಿಸಿದರು. ಈ ಮಾತಿಗೆ ಸಭೆಯಲ್ಲಿದ್ದ ರೈತರು ಬೆಂಬಲಿಸಿ ಕಾರ್ಖಾನೆ ಪರವಾಗಿ ಬಂದಿದ್ದ ಮಹದೇವಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧರದಲ್ಲಿ ಅವ್ಯವಹಾರ: ನಾನ್ ಅಗ್ರಿಮೆಂಟ್ ರೈತರಿಂದ ಕಳೆದ ಭಾರಿ ಪ್ರತಿ ಟನ್‌ಗೆ 50 ರೂ. ಕಡಿಮೆ ನೀಡಿದ್ದಾರೆ. ಅಗ್ರಿಮೆಂಟ್ ಹಾಗೂ ನಾನ್ ಅಗ್ರಿಮೆಂಟ್ ರೈತರಿಗೆ ವಿಧಿಸುವ ಕಬ್ಬಿನ ದರದಲ್ಲಿ ವ್ಯತ್ಯಾಸವಿರುವುದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳು ಕಾರ್ಖಾನೆ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕು ಎಂದು ಎಲ್ಲ ರೈತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಡಿ ಯೋಗಾನಂದ್ ಈ ಬಗ್ಗೆ ಪರಿಶೀಲನೆ ನಡೆಸಿ ವ್ಯತ್ಯಾಸವಾದ ರೈತರ ಹಣ ಅವರ ಖಾತೆಗೆ ಸೇರುವಂತೆ ಕ್ರಮ ವಹಿಸಲಾಗುತ್ತದೆ ಎಂದರು.

ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ , ಕೇನ್ ಕಮಿಷನರ್‌ನಿಂದ ಕಬ್ಬಿಗೆ ಎಫ್.ಆರ್.ಪಿ. ದರ ನಿಗದಿಯಾಗಿಲ್ಲ. ಇದ್ದರಿಂದ ಕಬ್ಬಿಗೆ ಮುಂಗಡ ಹಣ ಎಂದು ಕಡಿಮೆ ಹಣ ನೀಡುತ್ತಿದ್ದಾರೆ. ರೈತರ ಒತ್ತಾಯದಂತೆ ಬೆಲೆ ನಿಗದಿಯಾಗುವರೆಗೆ ಹೆಚ್ಚು ಹಣ ನೀಡುವುದರ ಬಗ್ಗೆ ಕಾರ್ಖಾನೆ ಚಿಂತನೆ ಮಾಡಬೇಕು. ಎಫ್.ಆರ್.ಪಿ. ದರ ನಿಗದಿಯಾದ ಮೇಲೆ ರೈತರ ಖಾತೆಗಳಿಗೆ ತ್ವರಿತವಾಗಿ ಹಣ ಪಾವತಿಯಾಗಬೇಕು ಎಂದು ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಮಂಜುಳಾ, ಯೋಗಾನಂದ್, ಕಬ್ಬು ಬೆಳೆಗಾರರಾದ ಬೂದಿತಿಟ್ಟು ಗುರುಸ್ವಾಮಿ, ಕಮಲ್, ಸೋಮಶೇಖರ್, ತಾಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ, ನರಸಿಂಹ, ಶಿವರಾಂ, ಮತ್ತಿತರಿದ್ದರು ಇದ್ದರು.