ಶಿರಹಟ್ಟಿ: ರೈತರು ಸಾಲ-ಸೋಲ ಮಾಡಿ ಕಷ್ಟಪಟ್ಟು ಬೆಳೆದ ಕಬ್ಬು ಸಕಾಲಕ್ಕೆ ಕಟಾವು ಆಗದೆ ಒಣಗುವ ಹಂತಕ್ಕೆ ತಲುಪಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನ ಗಂಗಾಪುರದಲ್ಲಿನ ವಿಜಯನಗರ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವಿಗೆ ವ್ಯವಸ್ಥೆ ಮಾಡದ ಕಾರಣ ಕಬ್ಬು ಬೆಳೆಗಾರರಿಗೆ ದಿಕ್ಕು ತೋಚದಾಗಿದೆ. ಕೃಷಿ ಇಲಾಖೆ ಅಂಕಿ-ಅಂಶದ ಪ್ರಕಾರ ಪ್ರಸಕ್ತ ವರ್ಷ ತಾಲೂಕಿನಲ್ಲಿ 560 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.
ಈ ಬಾರಿ ಉತ್ತಮ ಮಳೆಯಿಂದ ಕಬ್ಬು ಚೆನ್ನಾಗಿ ಬೆಳೆದಿದೆ. ಕಟಾವಿಗೆ ಬಂದಿರುವ ಫಸಲನ್ನು ಕಾರ್ಖಾನೆಯವರು ಇಷ್ಟೊತ್ತಿಗೆ ಕಟಾವು ಮಾಡಿ ತಮ್ಮ ಸುಪರ್ದಿಗೆ ಪಡೆಯಬೇಕಿತ್ತು. ಆದರೆ, 2-3 ತಿಂಗಳಾದರೂ ಕಟಾವು ಮಾಡುವ ಕೂಲಿ ಕಾರ್ವಿುಕರ ಸಮಸ್ಯೆಯ ನೆಪ ಹೇಳುತ್ತಿದ್ದಾರೆ. ಹೀಗಾಗಿ, ಕಾರ್ಖಾನೆಯವರ ವಿಳಂಬ ಧೋರಣೆಯಿಂದ ರೈತರ ಜಮೀನಿನಲ್ಲಿ ಬೆಳೆದು ನಿಂತ ಕಬ್ಬು ಒಣಗಲಾರಂಭಿಸಿದೆ. ಫಸಲಿನಲ್ಲಿನ ರಸದ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಇಂತಿಷ್ಟೇ ಟನ್ ಇಳುವರಿ ಬರಬಹುದೆಂಬ ಲೆಕ್ಕಾಚಾರದಲ್ಲಿದ್ದ ರೈತರ ನಿರೀಕ್ಷೆ ಹುಸಿಯಾಗಿದೆ. ಕಷ್ಟಪಟ್ಟು ಬೆಳೆದ ಫಸಲಿಗೆ ಪ್ರತಿಫಲ ಸಿಗದೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವುದು ತಪ್ಪಿಲ್ಲ ಎಂಬುದು ರೈತರ ಅಳಲು.
ಹೆಚ್ಚುವರಿ ಶುಲ್ಕದ ಹೊರೆ: ಕಬ್ಬು ಕಟಾವು ಮಾಡುವ ಕೂಲಿ ಕಾರ್ವಿುಕರಿಗೆ (ಬ್ಯಾಚ್) ಕಾರ್ಖಾನೆಯಿಂದ 370 ರೂಪಾಯಿ ನೀಡಲಾಗುತ್ತಿದೆ. ಪ್ರತಿ ಟನ್ಗೆ 450 ರೂಪಾಯಿ ಹೆಚ್ಚುವರಿ ನೀಡುವ ಜತೆಗೆ ಕಬ್ಬು ಸಾಗಣೆ ವಾಹನ ಚಾಲಕನಿಗೆ ಅಷ್ಟೇ ಹಣ ನೀಡಬೇಕು ಎಂದು ರೈತರಿಗೆ ಹೇಳುತ್ತಿದ್ದಾರೆ. ಆದರೆ, ಸಕ್ಕರೆ ಫ್ಯಾಕ್ಟರಿಯವರು ಪ್ರತಿ ಟನ್ ಕಬ್ಬಿಗೆ 2150 ರೂಪಾಯಿ ದರ ನಿಗದಿಪಡಿಸಿದ್ದು, ಅದರಲ್ಲಿ 1620 ರೂಪಾಯಿ ಕಟಾವಿಗೆ, ಕಬ್ಬು ಸಾಗಣೆ ವಾಹನ, ಇತರ ಖರ್ಚುಗಳನ್ನು ರೈತರೇ ಭರಿಸಿದರೆ ಮುಂದೆ ಅವರ ಕೈಗೆಟುಕುವ ಹಣ ಕೇವಲ 730 ರೂಪಾಯಿ. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಲು ಜಿಲ್ಲಾ ಉಸ್ತುವಾರಿ, ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ, ನ್ಯಾಯ ದೊರಕಿಸಲು ಇಚ್ಛಾಶಕ್ತಿ ತೋರಬೇಕು ಎಂಬುದು ರೈತರ ಆಗ್ರಹವಾಗಿದೆ.
ಈ ವರ್ಷ ಮಳೆ ಹೆಚ್ಚು ಸುರಿದಿದ್ದರಿಂದ ಕಬ್ಬು ಬೆಳೆಯ ಇಳುವರಿ ಜಾಸ್ತಿ ಬಂದಿದೆ. ಆದರೆ, ಫ್ಯಾಕ್ಟರಿಯಲ್ಲಿ ಕಬ್ಬು ನುರಿಯುವ ಪ್ರಮಾಣ 5 ಸಾವಿರ ಟನ್ ಸಾಮರ್ಥ್ಯವಾಗಿದೆ. ಅದಕ್ಕನುಗುಣವಾಗಿ ಕಬ್ಬು ಕಟಾವು ಮಾಡಲಾಗುತ್ತದೆ. ಮತ್ತೊಂದೆಡೆ ಕೆಲವು ರೈತರ ಹೊಲಗಳಲ್ಲಿನ ಬೆಳೆ ಅವಧಿ ಇನ್ನೂ ಇರುವುದರಿಂದ ಅವರು ಕಾಯಬೇಕಾಗುತ್ತದೆ. ಈಗಾಗಲೇ, ಕಟಾವು ಹಂತಕ್ಕೆ ಬಂದ ಕಬ್ಬನ್ನು ಕಟಾವು ಮಾಡಲು 2 ಬ್ಯಾಚ್ ಕಳುಹಿಸಲಾಗಿದೆ. ರೈತರು ಯಾವುದೇ ಕಾರಣಕ್ಕೂ ಆತಂಕಪಡಬಾರದು. ಹಂತ ಹಂತವಾಗಿ ಕಬ್ಬು ಕಟಾವು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
| ಮಂಜುನಾಥ ಎಜಿಎಂ, ಗಂಗಾಪುರ ಸಕ್ಕರೆ ಕಾರ್ಖಾನೆ
ಬೆಳೆದು ನಿಂತ ಕಬ್ಬು ಕಟಾವಿಗೆ 2-3 ತಿಂಗಳಿಂದ ಕಾರ್ಖಾನೆಯವರಿಗೆ ದುಂಬಾಲು ಬಿದ್ದರೂ ಎಜಿಎಂ ಮಂಜುನಾಥ ಎಂಬುವರು ಕಟಾವು ಮಾಡುವ (ಸಿಬ್ಬಂದಿ) ಕೂಲಿ ಕಾರ್ವಿುಕರ ನೆಪ ಹೇಳುತ್ತಿದ್ದಾರೆ. ಇದರಿಂದ ಕಬ್ಬಿನ ಬೆಳೆ ಒಣಗಲಾರಂಭಿಸಿದ್ದು, ರೈತರಿಗೆ ಬಹಳ ನಷ್ಟವಾಗುತ್ತದೆ. ಮತ್ತೊಂದೆಡೆ ಕಟಾವು, ಸಾಗಣೆ ಖರ್ಚು-ವೆಚ್ಚದ ಹೊರೆಯನ್ನು ರೈತರ ಮೇಲೆ ಹಾಕುತ್ತಿರುವುದನ್ನು ನಿಲ್ಲಿಸಬೇಕು. ಈ ಕುರಿತು ಕೃಷಿ ಸಚಿವರು, ಜಿಲ್ಲಾಧಿಕಾರಿಗಳು ಚಿಂತನ-ಮಂಥನ ನಡೆಸಿ ರೈತರಿಗಾಗುತ್ತಿರುವ ಶೋಷಣೆ ತಪ್ಪಿಸಬೇಕು. ಇಲ್ಲದಿದ್ದರೆ ಸಂಕಷ್ಟದಲ್ಲಿರುವ ರೈತರೊಂದಿಗೆ ಕಾರ್ಖಾನೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು.
| ಶಂಕರ ಮರಾಠೆ
ಕಬ್ಬು ಬೆಳೆಗಾರ