ಜಿಲ್ಲೆ

ಕಬ್ಬು ಅರೆಯುವಿಕೆಗೂ ಮುನ್ನ ಬೇಡಿಕೆಗಳನ್ನು ಈಡೇರಿಸಿ

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗೂ ಮುನ್ನ ಕಾರ್ಮಿಕರು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದರು.

ರೈಲ್ವೆ ನಿಲ್ದಾಣದ ಸಮೀಪದ ಪಿಎಸ್‌ಎಸ್‌ಕೆ ಕಾರ್ಖಾನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕಾರ್ಖಾನೆ ಆರಂಭಕ್ಕೂ ಮುನ್ನ ಕಬ್ಬು ಕಟಾವಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕಾರ್ಮಿಕರನ್ನು ಶೀಘ್ರವೇ ಕರೆಯಿಸಿ ಕಟಾವಿನ ಕೊನೆಯವರೆಗೂ ಉಳಿಯುವಂತೆ ನೋಡಿಕೊಳ್ಳಬೇಕು. ಪ್ರತಿವರ್ಷ ಕಟಾವಿಗಾಗಿ ಬರುವ ಕಾರ್ಮಿಕರು ಅರ್ಧದಲ್ಲೇ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಕಟಾವು ಮಾಡಿಸುವ ದಲ್ಲಾಳಿಗಳು ರೈತರಿಂದ ಹೆಚ್ಚು ಸುಲಿಗೆ ಮಾಡಿ ಕಟಾವು ಮಾಡಿಸುವುದರಿಂದ ಕಬ್ಬು ಬೆಳೆಗಾರರು ನಷ್ಟಕ್ಕಿಡಾಗುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಮುಖಿಯಾಗಿದ್ದು ಕಬ್ಬು ಸಾಗಣೆ ವಾಹನಗಳಿಗೆ ನಿಗದಿ ಮಾಡಿರುವ ಬಾಡಿಗೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆಗೆ ಎತ್ತಿನ ಗಾಡಿ ಮೂಲಕ ಕಬ್ಬು ಸಾಗಿಸುವ ರೈತರ ಕಬ್ಬುಗಳಿಗೆ ಆರಂಭದಲ್ಲೇ ಪರ್ಮಿಟ್ ನೀಡಬೇಕು. ಕಾರ್ಖಾನೆಗೆ ಆಗಮಿಸುವ ರೈತರು ಮತ್ತು ಕಾರ್ಮಿಕರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆಗಾಗಿ ಸ್ಥಗಿತಗೊಂಡಿರುವ ಕ್ಯಾಂಟೀನ್ ತೆರೆಯಬೇಕು. ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಕಾರ್ಖಾನೆ ಆವರಣದಲ್ಲಿ ತಂಗುದಾಣಗಳನ್ನು ನಿರ್ಮಿಸಿ ನಂತರದಲ್ಲಿ ಕಾರ್ಖಾನೆ ಕಬ್ಬು ಅರೆಯುವಿಕೆಗೆ ಚಾಲನೆ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಟಿ. ಗೋವಿಂದೇಗೌಡ, ರೈತಸಂಘ ತಾಲೂಕು ಅಧ್ಯಕ್ಷ ಪಿ.ನಾಗರಾಜು, ಪ್ರಧಾನ ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್, ಹರವು ಪ್ರಕಾಶ್, ಗೋವಿಂದರಾಜು, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜುನಾಥ್, ವೈ.ಜಿ.ರಘು ಇತರರು ಇದ್ದರು.