ಮೈಸೂರು: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರದಿಂದ ಅಹೋರಾತ್ರಿ ಆರಂಭಿಸಿದರು.
ಕಬ್ಬು, ಬಾಳೆ ಅಲ್ಲದೇ ತಾವು ಬೆಳೆದ ತರಕಾರಿ ಹಿಡಿದು ನಗರದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ (ಗನ್‌ಹೌಸ್) ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯಕ್ಕಿಂತ ಸಕ್ಕರೆ ಇಳುವರಿ ಕಡಿಮೆ ಬರುವ ಪಂಜಾಬ್‌ನಲ್ಲಿ ಟನ್ ಕಬ್ಬಿಗೆ 3800 ರೂ., ಉತ್ತರ ಪ್ರದೇಶದಲ್ಲಿ 3500 ರೂ., ಗುಜರಾತ್‌ನಲ್ಲಿ 4400 ದರ ನಿಗದಿ ಮಾಡಿದ್ದಾರೆ. ರಾಜ್ಯ ಸರ್ಕಾರ ಈ ರಾಜ್ಯಗಳ ಮಾದರಿಯಲ್ಲಿ ಎಫ್‌ಆರ್‌ಪಿ ಬೆಲೆಯನ್ನು ಕನಿಷ್ಠ ಇಳುವರಿಗೆ ಟನ್‌ಗೆ 3500 ರೂ. ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ಕಟಾವು ಸಾಗಣೆ ವೆಚ್ಚದಲ್ಲಿ ಕಾರ್ಖಾನೆಯವರು ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. 12 ತಿಂಗಳಿಗೆ ಕಬ್ಬು ಕಟಾವು ಆಗಬೇಕಾಗಿದ್ದರೂ 16 ತಿಂಗಳಿಗೆ ಕಟಾವು ಅಗುತ್ತಿದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ರೈತನ ಜಮೀನಿನಿಂದ ಕಾರ್ಖಾನೆ ನಡುವೆ ಇರುವ ಕಿಲೋಮೀಟರ್ ಆಧಾರದ ದರ ಕಡಿತ ಮಾಡಬೇಕು. ಕಾನೂನುಬಾಹಿರವಾಗಿ ಹೆಚ್ಚುವರಿ ಮಾಡಿದರೆ ಆಯಾ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ವಂಚನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ಕಟಾವು ವಿಳಂಬದ ಬಡ್ಡಿ ಸೇರಿಸಿ ಹೆಚ್ಚುವರಿ ದರ ಕೊಡಬೇಕು. ಸಕ್ಕರೆ ಕಾರ್ಖಾನೆ ಫೀಲ್ಡ್‌ಮನ್‌ಗಳು ಬಿಲ್‌ನಲ್ಲಿ ನೋಂದಾಯಿಸದೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದು ನಿಲ್ಲಬೇಕು. ರೈತ ಮತ್ತು ಕಾರ್ಖಾನೆ ನಡುವೆ ಸರ್ಕಾರ ಜಾರಿಗೆ ತಂದಿರುವ ದ್ವಿಪಕ್ಷೀಯ ಒಪ್ಪಂದಪತ್ರ ಜಾರಿ ಮಾಡಬೇಕು, ಒಪ್ಪಂದದ ಪತ್ರವನ್ನು ರೈತರಿಗೂ ಕೊಡಬೇಕು ಎಂದು ದೂರಿದರು.
ವಿದ್ಯುತ್ ಖಾಸಗಿಕರಣ ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ಕೈ ಬಿಡಬೇಕು. ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಪದ್ಧತಿ ಪರಿಗಣಿಸಿ ಸಾಲ ನೀಡುವ ಪದ್ಧತಿ ಕೈಬಿಡಬೇಕು. ಸರ್ಕಾರ ನೀಡುವ ಪರಿಹಾರ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಸಾಲದ ಖಾತೆಗಳಿಗೆ ಜಮಾ ಮಾಡಬಾರದು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ, ಅರಣ್ಯ ಭೂಮಿಯನ್ನು ವ್ಯವಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪಟ್ಟಾವನ್ನು ನೀಡಬೇಕು. ಕಾಡಂಚಿನಲ್ಲಿ ಪ್ರಾಣಿಗಳ ಹಾವಳಿ ತಪ್ಪಿಸಿ, ಕಾಡು ಪ್ರಾಣಿಗಳಿಂದ ಆಗುವ ಬೆಳೆ ಹಾನಿ ಪರಿಹಾರ ವೈಜ್ಞಾನಿಕವಾಗಿ ನಷ್ಟ ಭರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ಧರಣಿ ಕೈಬಿಡುವಂತೆ ಮನವಿ ಮಾಡಿದರು. ಆದರೆ, ಬೇಡಿಕೆ ಈಡೇರಿಸಬೇಕು, ಇಲ್ಲವಾದರೆ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದ ಪ್ರತಿಭಟನಾಕಾರರು ಧರಣಿ ಮುಂದುವರಿಸಿದರು.