ಜಿಲ್ಲೆ

ಕಬ್ಬಿನ ದರ ಏರಿಕೆಗೆ ಆಗ್ರಹಿಸಿ ಬೆಳಗಾವಿ ಚಲೋ

ಹುಬ್ಬಳ್ಳಿ: ಕಬ್ಬಿನ ಎಫ್​ಆರ್​ಪಿ ದರ ಏರಿಕೆ, ಕಟಾವ ಕೂಲಿ ಹೆಚ್ಚಳ, ಸಾಗಾಣಿಕೆ ವೆಚ್ಚ ಕಡಿತ ಮಾಡುವ ಬಗ್ಗೆ ಮುಖ್ಯಮಂತ್ರಿಯವರು ಒಪ್ಪಿಕೊಂಡಿದ್ದಾರೆ. ಅದರಂತೆ ಡಿ. 23ರಂದು ಆಚರಿಸುವ ವಿಶ್ವ ರೈತ ದಿನದ ಒಳಗಾಗಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ತೋರಿದರೆ 26ರಂದು ಬೆಳಗಾವಿ ಸುವರ್ಣಸೌಧಕ್ಕೆ ಧಾರವಾಡದಿಂದ ಜಾಥಾ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರ ಶಾಂತಕುಮಾರ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿಂದ ಕಬ್ಬು ನುರಿಸಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣ ಪಾವತಿಸಿಲ್ಲ. ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ ಸ್ವಲ್ಪ ಪಾವತಿಸಿದ್ದಾರೆ. ಎಫ್​ಆರ್​ಪಿ ನಿಯಮ ಪ್ರಕಾರ 14 ದಿವಸದಲ್ಲಿ ಪಾವತಿಸಬೇಕು. ಆದರೂ ಕಾರ್ಖಾನೆಗಳು ನಿಯಮ ಉಲ್ಲಂಘನೆ ಮಾಡಿ, ಎರಡು ಸಾವಿರ ಕೋಟಿಗೂ ಹೆಚ್ಚು ಹಣ ಉಳಿಸಿಕೊಂಡಿದ್ದಾರೆ ಎಂದು ದೂರಿದರು.

23ರಂದು ಧಾರವಾಡದಲ್ಲಿ ರಾಜ್ಯಮಟ್ಟದ ವಿಶ್ವ ರೈತ ದಿನಾಚರಣೆ ಆಯೋಜಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ದುಡಿದ ಕಾಯಕಯೋಗಿಗಳನ್ನು ಗೌರವಿಸಲಾಗುವುದು. ಪ್ರತಿ ಎಕ್ಕರೆಗೆ 160 ಟನ್ ಕಬ್ಬು ಬೆಳೆದು ವಿಶ್ವ ಸಾಧನೆ ಮಾಡಿರುವ ಮಹಾರಾಷ್ಟ್ರದ ಸಂಜೀವ್ ಮಾನೆ ರೈತ ಸಮಾವೇಶ ಉದ್ಘಾಟಿಸುವರು. ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ಜಗಜಿತ್ ಸಿಂಗ್ ಧಲೆವಾಲ್, ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ. ಪಾಟೀಲ ಹಾಗೂ ಕೃಷಿ ಲೇಖಕ ವೀರಭದ್ರಪ್ಪ ಬಿಸಲಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಪ್ರಸಕ್ತ ಸಾಲಿನಲ್ಲಿ ನಿಗದಿ ಮಾಡಿರುವ ಕಬ್ಬಿನ ಎಫ್​ಆರ್​ಪಿ ದರ , ಸಕ್ಕರೆ ಇಳುವರಿ ಮಾನದಂಡ ಅನ್ಯಾಯ ಸರಿಪಡಿಸುವಂತೆ, ಸಕ್ಕರೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವಂತೆ ಆಗ್ರಹಿಸಿ ವಿವಿಧ ರಾಜ್ಯಗಳ ರೈತ ಮುಖಂಡರು ಹಾಗೂ ಸಂಸದರ ನಿಯೋಗ ಮಂಗಳವಾರದಂದು ದೆಹಲಿಯಲ್ಲಿ ಕೃಷಿ ಸಚಿವ ನರೇಂದ್ರಸಿಂಗ್ ತೂಮರ್ ಅವರಿಗೆ ಮನವಿ ಸಲ್ಲಿಸಿದ್ದು, ಈ ವಿಷಯಗಳ ಬಗ್ಗೆ ಗಂಭೀರ ಚಿಂತನೆ ನಡೆಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಹೇಳಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ, ಪರಶುರಾಮ ಎತ್ತಿನಗುಡ್ಡ ಸುದ್ದಿಗೋಷ್ಠಿಯಲ್ಲಿ ಇದ್ದರು.