ಬೆಳಗಾವಿ: ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎ್ಆರ್‌ಪಿಯಲ್ಲಿ ರೈತರ ಕೃಷಿ ವೆಚ್ಚ ಕಡಿಮೆಗೊಳಿಸಿ, ಸಾಗಣೆ ಮತ್ತು ಕಟಾವು ವೆಚ್ಚ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಸಾಗಣೆ ವೆಚ್ಚದಲ್ಲಿ ವೈಜ್ಞಾನಿಕ ವ್ಯವಸ್ಥೆ ಅಳವಡಿಸಬೇಕು.
ಪಂಜಾಬ್ ರಾಜ್ಯದಲ್ಲಿ ನಮಗಿಂತ ಕಡಿಮೆ ರಿಕವರಿ ಹೊಂದಿರುವ ಕಬ್ಬಿನ ದರವು 3,800 ರೂ. ಇದೆ. ಆದ್ದರಿಂದ ರಾಜ್ಯದಲ್ಲಿ ಬೆಳೆಯುವ ಪ್ರತಿ ಟನ್ ಕಬ್ಬಿಗೆ 3,800 ರೂ. ಮೇಲ್ಪಟ್ಟು ದರ ನಿಗದಿಪಡಿಸಬೇಕು. ಕಬ್ಬಿನ ಉಪ ಉತ್ಪನ್ನಗಳಾದ ಇಥೆನಾಲ್,
ಸ್ಪಿರಿಟ್‌ನಿಂದ ಕಾರ್ಖಾನೆಗಳಿಗೆ ಮತ್ತು ಸರ್ಕಾರಕ್ಕೆ ಅಪಾರ ಲಾಭವಿದೆ. ಕಬ್ಬಿನ ಉಪ ಉತ್ಪನ್ನಗಳಿಂದ ಸರ್ಕಾರ ಹೋಗುವ ತೆರಿಗೆ ಹಣದಲ್ಲಿ ಪ್ರತಿ ಟನ್ ಕಬ್ಬಿಗೆ 2,000 ರೂ. ರೈತರಿಗೆ ಹೆಚ್ಚುವರಿಯಾಗಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ಶಂಕರ ಹೆಗಡೆ, ಅಬ್ದುಲ್ ತವಾಬ್ ಶೇಖ, ಬಸೀರ್ ಜಮಾದಾರ, ನುಮಾನ್ ಖಾನಾಪುರಿ, ನಿಹಾಲ್ ಚಚಡಿ, ಜುನೇದ್ ಸೈಯದ್ ಇತರರಿದ್ದರು.