ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಪ್ರೌಢಶಾಲೆಯೆಲ್ಲಿ ಶಿಕ್ಷಕರಾಗಿರುವ ವೆಂಕಟರಮಣಶೆಟ್ಟಿ ತಮ್ಮ ಮನೆಯ ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡಿದ್ದಾರೆ. 
ಜಿಲ್ಲೆ

ಕಬ್ಬಹಳ್ಳಿಯಲ್ಲಿ ಗರ್ಭಿಣಿ ಬೆಕ್ಕಿಗೆ ಸೀಮಂತ

ಗುಂಡ್ಲುಪೇಟೆ: ತಾಲೂಕಿನ ಕಬ್ಬಹಳ್ಳಿ ಗ್ರಾಮದ ಶಿಕ್ಷಕರೊಬ್ಬರು ತಮ್ಮ ಮನೆಯಲ್ಲಿ ಗರ್ಭಿಣಿ ಬೆಕ್ಕಿಗೆ ಸೀಮಂತ ಮಾಡುವ ಮೂಲಕ ಪ್ರಾಣಿಪ್ರೀತಿ ಮೆರೆದಿದ್ದಾರೆ.

ಕಬ್ಬಹಳ್ಳಿಯ ಕೆಂಪದೇವಮ್ಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ವೆಂಕಟರಮಣಶೆಟ್ಟಿ ಹಾಗೂ ಇವರ ಪತ್ನಿ, ತಮ್ಮ ಮನೆಯಲ್ಲಿ ಸಾಕಿರುವ ಪ್ರೀತಿಯ ಬೆಕ್ಕು ‘ಸುಬ್ಬಿ’ಗೆ ಸೀಮಂತಶಾಸ್ತ್ರ ಮಾಡುವ ಮೂಲಕ ಮಾತೃಪ್ರೇಮ ಪ್ರದರ್ಶಿಸಿದ್ದಾರೆ. ಎಲ್ಲ ಮನೆಗಳಲ್ಲಿಯೂ ಹೆಣ್ಣುಮಕ್ಕಳಿಗೆ ಮಾಡುವಂತೆ ಸಾಂಪ್ರದಾಯಿಕವಾಗಿ ಫಲತಾಂಬೂಲ, ತಿಂಡಿ-ತಿನಿಸು ಇಟ್ಟು ಬೆಕ್ಕಿಗೆ ಹೊಸಬಟ್ಟೆ ತೊಡಿಸಿ, ಹಣೆಗೆ ಕುಂಕುಮ ಇಟ್ಟು ಸೀಮಂತ ಮಾಡಿ ಸಂಭ್ರಮಿಸಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ಮರಿಯನ್ನು ಮನೆಗೆ ತಂದು ಮಗುವಿನಂತೆ ಪಾಲಿಸುತ್ತಿರುವ ದಂಪತಿಗೆ ಪ್ರಥಮ್ ಹಾಗೂ ಪ್ರೀತಂ ಎಂಬ ಇಬ್ಬರು ಪುತ್ರರಿದ್ದಾರೆ. ಪ್ರಥಮ್‌ಗೆ ಈ ಬೆಕ್ಕು ಎಂದರೆ ಪಂಚಪ್ರಾಣ. ಎರಡು ದಿನಗಿಳಿಗೊಮ್ಮೆ ಬೆಕ್ಕಿಗೆ ಸ್ನಾನ ಮಾಡಿಸಿ, ಅದಕ್ಕೆ ಬೇಕಾದ ಆಹಾರ ನೀಡುವ ಜತೆಗೆ, ತಮ್ಮ ಜತೆಯಲ್ಲಿಯೇ ಮಲಗಿಸಿಕೊಂಡು ಪ್ರೀತಿ ತೋರಿಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಬೆಕ್ಕು ಮನೆಯ ಸದಸ್ಯನಾಗಿದೆ.

ಶೆಟ್ಟರು ಮನೆಗೆ ಮರಳುವಾಗ ಇಷ್ಟವಾದ ತಿನಿಸು ತರುತ್ತಿದ್ದರು. ಇದರಿಂದ ಪ್ರತಿ ದಿನ ಅವರು ಶಾಲೆಯಿಂದ ಮನೆಗೆ ಬರುವುದನ್ನೇ ಕಾಯುವ ಬೆಕ್ಕು, ಬೈಕ್ ಶಬ್ದ ಕೇಳಿದರೆ ಶೆಟ್ಟರ ಬಳಿ ಓಡಿ ಹೋಗುತ್ತದೆ. ಅಕಸ್ಮಾತ್ ಏನೂ ತರದಿದ್ದರೆ ಮಂಕಾಗಿಬಿಡುತ್ತದೆ. ಆಗ ಬೇರೇನಾದರೂ ತಿಂಡಿ ನೀಡಿ ಅದನ್ನು ಸಂತೈಸಲಾಗುತ್ತದೆ. ಮನೆಯ ಪ್ರತಿಯೊಬ್ಬರೂ ಇದನ್ನು ಬಿಟ್ಟುಹೋಗಲಾರದಷ್ಟು ಹಚ್ಚಿಕೊಂಡಿದ್ದಾರೆ. ಒಮ್ಮೆ ಮೂರು ದಿನ ತಿರುಪತಿಗೆ ಹೋಗಬೇಕಾಗಿದ್ದನ್ನೇ ದಂಪತಿ ಕೈಬಿಟ್ಟಿದ್ದರು. ಅಲ್ಲದೆ, ಹಬ್ಬ-ಹರಿದಿನ ಎನ್ನದೆ ಬೆಕ್ಕಿಗಾಗಿ ಮನೆಯಲ್ಲಿಯೇ ಎಲ್ಲ ದಿನಗಳಲ್ಲಿಯೂ ಪೌಷ್ಟಿಕವಾದ ಮಾಂಸಾಹಾರ ಸಿದ್ಧಪಡಿಸಿ ಪೋಷಿಸುತ್ತಿದ್ದಾರೆ.