ಜಿಲ್ಲೆ

ಕಬಿನಿಯಿಂದ ನೀರು ಹರಿಸಿದ್ದಕ್ಕೆ ರೈತರ ಆಕ್ರೋಶ

ಎಚ್.ಡಿ.ಕೋಟೆ: ತಾಲೂಕಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೋಮವಾರ ಕಬಿನಿ ಜಲಾಶಯದ ಮುಖ್ಯದ್ವಾರದ ಬಳಿ ಕರ್ನಾಟಕ ರಾಜ್ಯ ರೈತ ಪರ್ವ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.


ರೈತರ ಹೆಸರು ಹೇಳಿಕೊಂಡು ಅಧಿಕಾರ ಹಿಡಿಯುವ ಯಾವುದೇ ಸರ್ಕಾರ ಕೂಡ ರೈತರ ಪರ ನಿಲ್ಲುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರೈತ ಪರ್ವ ರಾಜ್ಯಾಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ, ರೈತಪರ ಸಂಘಟನೆಗಳು ನೀರಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.


ಕಾರ್ಯಾಧ್ಯಕ್ಷ ವೈ.ಎಲ್.ನವೀನ್‌ಗೌಡ ಮಾತನಾಡಿ, ರಾಜಕಾರಣಿಗಳು ರೈತರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ರೈತರು ಒಗ್ಗೂಡಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಡೆಯುವ ಕೆಲಸ ಮಾಡಬೇಕಾಗಿದೆ ಎಂದರು.
ಕಬಿನಿ ಜಲಾಶಯದಲ್ಲಿ ಹಿನ್ನೀರು ಕಡಿಮೆಯಾಗಲು ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಜಲಾಶಯದಲ್ಲಿ ನೀರನ್ನು ಶೇಖರಣೆ ಮಾಡಿಕೊಳ್ಳದೆ ನದಿಗೆ ಬಿಟ್ಟಿದ್ದಾರೆ ಎಂದು ನೀರಾವರಿ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.
ರೈತರ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಜಲಾಶಯದಿಂದ ತಮಿಳುನಾಡಿಗೆ ಬಿಟ್ಟಿದ್ದ ನೀರನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಕಡಿಮೆ ಪ್ರಮಾಣದಲ್ಲಿ ಕುಡಿಯುವ ನೀರಿಗೆಂದು ಬಿಡಲಾಗುತ್ತಿದೆ ಎಂದು ಸಬೂಬು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬಿನಿ ಕಾರ್ಯಪಾಲಕ ಇಂಜಿನಿಯರ್ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜನಾರ್ದನ್, ಸಹಾಯಕ ಇಂಜಿನಿಯರ್ ರಮೇಶ್‌ಬಾಬು ಅವರಿಗೆ ಮನವಿ ಪತ್ರ ನೀಡಿ ಪ್ರತಿಭಟನೆಯನ್ನು ಕೈಬಿಡಲಾಯಿತು.


ಎಸ್‌ಐಗಳಾದ ರವಿಶಂಕರ್, ನಂದೀಶ್‌ಕುಮಾರ್, ತಮ್ಮೇಗೌಡ, ಗೋಪಾಲಕೃಷ್ಣ, ಎಎಸ್‌ಐ ಪುಟ್ಟನಾಯಕ, ಕುಮಾರ್, ಸುಬ್ರಹ್ಮಣ್ಯ ಸೇರಿದಂತೆ ಎರಡು ಪೊಲೀಸ್ ತುಕಡಿಯನ್ನು ಜಲಾಶಯದ ಮುಖ್ಯ ದ್ವಾರದ ಬಳಿ ನಿಯೋಜಿಸಲಾಗಿತ್ತು.
ಕರ್ನಾಟಕ ರೈತ ಪರ್ವ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಲತಾ, ಕೋಟೆ ತಾಲೂಕು ಅಧ್ಯಕ್ಷ ಕುಮಾರ್, ನಂಜನಗೂಡು ತಾಲೂಕು ಅಧ್ಯಕ್ಷ ಕೃಷ್ಣನಾಯಕ್, ಹುಣಸೂರು ತಾಲೂಕು ಅಧ್ಯಕ್ಷ ಬಾಲಕೃಷ್ಣ, ರೈತ ಮುಖಂಡರಾದ ನಾಗರತ್ನಾ, ಭಾಗ್ಯಮ್ಮ, ಮಾಲಮ್ಮ, ರೇಣುಕಾ, ಸುಧಾ ಜ್ಯೋತಿ, ಶಶಿಕಲಾ, ಯೋಗೇಶ್ ಸಿದ್ಲಿಂಗೇಗೌಡ, ಏಜಾಜ್ ಪಾಷಾ, ಬೀಚನಹಳ್ಳಿ ಅಬೀಬ್, ವೀರಣ್ಣ, ಮಂಜುನಾಥ್, ದೇವನಾಯಕ, ಮಂಜು ಶಿವಮಲ್ಲಪ್ಪ, ನಾಗರಾಜು ಇತರರಿದ್ದರು.

ಕಬಿನಿ ಸುಭಾಷ್ ಪವರ್ ಪ್ರಾಜೆಕ್ಟ್‌ನಿಂದ 5 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿತ್ತು. ಇದೀಗ ಅದನ್ನು ಸ್ಥಗಿತಗೊಳಿಸಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿ ಇದ್ದು, ಪ್ರಸ್ತುತ 2276 ಅಡಿಯಷ್ಟು ನೀರಿದೆ. ಒಳಹರಿವು 3868 ಕ್ಯೂಸೆಕ್ ಇದ್ದು, ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಭಾನುವಾರ ರಾತ್ರಿಯಿಂದ ಕುಡಿಯುವ ನೀರಿಗೆಂದು 800 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಚಂದ್ರಶೇಖರ್, ಕಬಿನಿ ಕಾರ್ಯಪಾಲಕ ಇಂಜಿನಿಯರ್

ಫೋಟೋ ಇದೆ
21ಊಆಏ9
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದ ಮುಖ್ಯದ್ವಾರದ ಮುಂಭಾಗ ಕರ್ನಾಟಕ ರಾಜ್ಯ ರೈತ ಪರ್ವ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

21ಊಆಏ9