ಜಿಲ್ಲೆ

ಕಬಿನಿ ಬೃಂದಾವನಕ್ಕೆ ಗ್ರಹಣ

ಮಂಜುನಾಥ ತಿಮ್ಮಯ್ಯ ಮೈಸೂರು

ಹೇಳರವಾಗಿ ಅರಣ್ಯ ಮತ್ತು ಜಲ ಸಂಪನ್ಮೂಲ ಹೊಂದಿರುವ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಬಳಿ ಕೆಆರ್‌ಎಸ್ ಮಾದರಿಯಲ್ಲಿ ಆಕರ್ಷಕ ಬೃಂದಾವನ ನಿರ್ಮಾಣದ ಬಹುದಿನದ ಬೇಡಿಕೆ ಇನ್ನೂ ಕನಸಾಗಿಯೇ ಉಳಿದಿದೆ. ಇಡೀ ಯೋಜನೆಗೆ ಗ್ರಹಣ ಹಿಡಿದಿದೆ!

ಭಾನುವಾರ ಕಬಿನಿ ಜಲಾಶಯಕ್ಕೆ 7ನೇ ಬಾರಿ ಬಾಗಿನ ಅರ್ಪಿಸಿ ಚರಿತ್ರೆ ಸೃಷ್ಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಸ್ಪಷ್ಟ ಭರವಸೆ ನೀಡಲಿಲ್ಲ. ಇವರೇ ಘೋಷಣೆ ಮಾಡಿದ ಯೋಜನೆಗೆ ಸ್ಪಷ್ಟ ಚಿತ್ರಣ ಭಾನುವಾರವೂ ಸಹ ದೊರೆಯಲಿಲ್ಲ.

ಕೆಆರ್‌ಎಸ್‌ನಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಇಲ್ಲೂ ಸುಸಜ್ಜಿತ ಉದ್ಯಾನ ನಿರ್ಮಾಣ ಮಾಡಬೇಕಿದೆ. ಕಳೆದ 2 ದಶಕಗಳಿಂದ ಕೇವಲ ಆಶ್ವಾಸನೆಯಲ್ಲೇ ಸಮಯ ಗತಿಸಿ ಹೋಗಿದೆ. ಕಬಿನಿ ಭರ್ತಿಯಾದಾಗ ಪ್ರತಿ ವರ್ಷ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಲಸಂಪನ್ಮೂಲ ಸಚಿವರು ಉದ್ಯಾನ ನಿರ್ಮಿಸುವ ಕುರಿತು ಭರವಸೆ ಕೊಟ್ಟು ಹೋಗುತ್ತಾರೆ.

ಅದು ಆ ದಿನಕ್ಕೆ ಮಾತ್ರ ಸೀಮಿತವಾಗುತ್ತದೆ. ಬಳಿಕ ಮರೆತು ಬಿಡುತ್ತಾರೆ. ಇದರಿಂದ ಈ ಭರವಸೆ ಕಡತದಲ್ಲೇ ಕರಗಿಹೋಗಿದೆ. ಇತ್ತ ನಿರ್ವಹಣೆ ಇಲ್ಲದೆ ಉದ್ಯಾನ ಪಾಳುಬಿದ್ದಿದೆ.

ಪ್ರವಾಸಿ ತಾಣವಾಗಿ ಉದ್ಯಾನ ನಿರ್ಮಿಸಲು ಕಬಿನಿ ಡ್ಯಾಂ ಹಿಂಭಾಗದಲ್ಲಿ ಬರೋಬ್ಬರಿ 60 ಎಕರೆ ಭೂಮಿ ಕೂಡ ಸಿದ್ಧವಾಗಿದೆ. ಕಾರ್ಯಗತಗೊಳಿಸುವುದೊಂದೇ ಬಾಕಿ ಉಳಿದಿದೆ. ಆದರೆ ಈ ಕುರಿತು ಇಚ್ಛಾಶಕ್ತಿ ಕೊರತೆಯಿಂದ ಇದು ಸಕಾರಾಗೊಳ್ಳುತ್ತಿಲ್ಲ.

ಉದ್ಯಾನ ನಿರ್ಮಿಸಿದರೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ದೊರೆಯಲಿದೆ. ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಆದರೆ ಇದು ಆಗುತ್ತಿಲ್ಲ ಎಂಬ ಕೊರಗು ಸ್ಥಳೀಯರಲ್ಲಿ ಕಾಡುತ್ತಿದೆ.

ಕಬಿನಿ ಜಲಾಶಯ ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯ ಹಾಗೂ ತಮಿಳುನಾಡಿಗೆ ನೀರಿನ ಸಂಕಷ್ಟ ಎದುರಾದಾಗ ಕಬಿನಿ ನೆನಪಿಗೆ ಬರುತ್ತದೆ. ಆದರೆ ಈ ಡ್ಯಾಂನಿಂದ ಎಚ್.ಡಿ.ಕೋಟೆ ತಾಲೂಕಿನ ರೈತರಿಗೆ ಅಷ್ಟಾಗಿ ಪ್ರಯೋಜನವೇನು ಇಲ್ಲ. ನೆರೆ ರಾಜ್ಯ, ನೆರೆ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗಿದೆ. ಆದರೂ ಈ ಕುರಿತು ಯಾರೊಬ್ಬರೂ ಕಾಳಜಿ ವಹಿಸಿಲ್ಲ.

ಮೊದಲ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಅವರು ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಣೆಗೆ ಮೊದಲ ಬಾರಿಗೆ ಆಗಮಿಸಿದ್ದಾಗ ಜಲಾಶಯದ ಆಸುಪಾಸಿನಲ್ಲಿ ಗಿಡಗಂಟಿಯಿಂದ ಆವೃತ್ತವಾಗಿರುವ ಜಲಾಶಯಕ್ಕೆ ಸೇರಿದ ಜಾಗವನ್ನು ಪ್ರವಾಸಿ ತಾಣ ಮಾಡುವ ಭರವಸೆ ನೀಡಿದ್ದರು. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದರು. ಆದರೆ, ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಯಾರು ಮುಂದೆ ಬರಲಿಲ್ಲ. ಅಲ್ಲಿಯಿಂದ ಇದು ನನೆಗುದಿಗೆ ಬಿದ್ದಿದೆ. ಅವರು 2ನೇ ಬಾರಿ ಸಿಎಂ ಆದರೂ ಸ್ಪಷ್ಟ ರೂಪ ಕೊಡಲು ಆಸಕ್ತಿ ತೋರುತ್ತಿಲ್ಲ.

ಬಿಜೆಪಿ, ಜೆಡಿಎಸ್ ಅವಧಿಯಲ್ಲೂ ಆಗಲಿಲ್ಲ:

ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲೂ ಯಾವುದೇ ಪ್ರಕ್ರಿಯೆ ಆಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ ಅವರು ಹೇಳಿಕೆಗೆ ಮಾತ್ರ ಸೀಮಿತವಾದರೇ ಹೊರತು, ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

ಬೃಹತ್ ವಿಸ್ತೀರ್ಣದ ಈ ಜಾಗವು ಕೆಆರ್‌ಎಸ್ ಮಾದರಿಯಲ್ಲಿ ಬೃಂದಾವನ ನಿರ್ಮಿಸಲು ಯೋಗ್ಯವಾಗಿದೆ. ಸುಸಜ್ಜಿತ ಉದ್ಯಾನ ನಿರ್ಮಿಸಿದರೆ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ದೊರೆಯಲಿದೆ. ಅಲ್ಲದೆ ಇಲ್ಲಿ ವ್ಯಾಪಾರ, ವಹಿವಾಟು ಹೆಚ್ಚಾಗಿ ಆರ್ಥಿಕತೆಗೂ ನೆರವಾಗಲಿದೆ. ಜತೆಗೆ ಸ್ಥಳೀಯವಾಗಿ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಸಹಸ್ರಾರು ಜನರಿಗೆ ಕೆಲಸ ಸಿಗಲಿದೆ. ಎಚ್.ಡಿ.ಕೋಟೆ ಶೇ.70 ಭಾಗ ಕಾಡಿನಿಂದ ಕೂಡಿದೆ. ಅಚ್ಚ ಹಸಿರನ್ನು ಹೊಂದಿರುವ ಸುಂದರ ನಿಸರ್ಗ ತಾಣವಾಗಿದೆ. ಮೈಸೂರಿನ ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ಪ್ರವಾಸಿಗರು ಕಬಿನಿಗೂ ಬರುತ್ತಾರೆ.

ಉದ್ದೇಶಿತ ಯೋಜನೆ ಕಾರ್ಯಗತಗೊಂಡಲ್ಲಿ ಕೆಆರ್‌ಎಸ್ ಬೃಂದಾವನದಂತೆ ಜಿಲ್ಲೆಯಲ್ಲೂ ಕೂಡ ಕಬಿನಿ ಬೃಂದಾವನ ಪ್ರಖ್ಯಾತಿಗೊಳಿಸಬಹುದಾಗಿದೆ. ಪಕ್ಕದ ಕೇರಳ ಪ್ರವಾಸಿಗರನ್ನೂ ಆಕರ್ಷಿಸಬಹುದಾಗಿದೆ. ವನ್ಯಜೀವಿ, ಅರಣ್ಯ ಪ್ರವಾಸಿಗರನ್ನು ಇಲ್ಲಿಗೂ ಸೆಳೆಯಬಹುದಾಗಿದೆ. ಜತೆಗೆ ಕಬಿನಿಯೊಂದಿಗೆ ತಾರಕ, ನುಗು, ಹೆಬ್ಬಳ್ಳ ಮೊದಲಾದ ಜಲಾಶಯಗಳಿಗೆ ಸಂಪರ್ಕಿಸಿ ಪ್ರವಾಸಿ ತಾಣವಾಗಿ ರೂಪಿಸಬಹುದಾಗಿದೆ.

ಜಿಲ್ಲೆಗೆ ವರದಾನ:

ಬಿದರಹಳ್ಳಿ ಮತ್ತು ಬೀಚನಹಳ್ಳಿ ಸಮೀಪ 1959ರಲ್ಲಿ ಕಟ್ಟಿರುವ ಕಬಿನಿ ಜಲಾಶಯವು ಇದೀಗ 66 ವರ್ಷ ಪೂರೈಸಿದೆ. ಕೃಷಿ, ನೀರಾವರಿ, ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವ ಈ ಜಲಾಶಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆಸಕ್ತಿ ತೋರಬೇಕಿದೆ. ಇದು ಕಾರ್ಯರೂಪಕ್ಕೆ ಬಂದರೆ ಮೈಸೂರು ಜಿಲ್ಲೆಗೆ ವರದಾನವಾಗಲಿದೆ. ವನ್ಯಜೀವಿಗಳಿಗೆ ಆಶ್ರಯ ತಾಣ

ಕಬಿನಿ ಮತ್ತು ಕಪಿಲಾ ಎಂದು ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಪನಮರಮ್ ಮತ್ತು ಮಾನಂದವಾಡಿ ನದಿಗಳ ಸಂಗಮದಿಂದ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲ ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿ ಸಮುದ್ರ ಸೇರುತ್ತದೆ. ಬೇಸಿಗೆಯಲ್ಲಿ ಈ ನದಿಯ ಹಿನ್ನೀರಿನಲ್ಲಿ ವಿಶೇಷವಾದ ವನ್ಯಜೀವಿಗಳು ಹೇರಳವಾಗಿ ಕಂಡು ಬರುತ್ತವೆ. ಕಬಿನಿ ಅಣೆಕಟ್ಟಿನ ಉದ್ದ 2,284 ಅಡಿ (696 ಮೀ), 19.52 ಟಿಎಂಸಿಯಷ್ಟು ನೀರನ್ನು ಶೇಖರಿಸಬಹುದು.

ಕೆಆರ್‌ಎಸ್ ಮಾದರಿಯಲ್ಲಿ ಕಬಿನಿ ಜಲಾಶಯ ಬಳಿ ಆಕರ್ಷಕ ಬೃಂದಾವನ ನಿರ್ಮಾಣದ ಕುರಿತು ನಾನೇ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೆ. ಕೆಲ ಕಾರಣದಿಂದ ಇದು ಆಗಲಿಲ್ಲ. ಪ್ರಸ್ತಕ ಸಾಲಿನಲ್ಲಿ ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.ಮುಖ್ಯಮಂತ್ರಿ ಸಿದ್ದರಾಮಯ್ಯ