ಜಿಲ್ಲೆ

ಕಬಿನಿ ನಾಲೆಗಳ ಆಧುನೀಕರಣ: ಸಿಎಂ ಸಿದ್ದರಾಮಯ್ಯ

ಮೈಸೂರು: ಕಬಿನಿ ಜಲಾಶಯ ಸುರಕ್ಷತೆ, ಅಭಿವೃದ್ಧಿಗೆ ಅನೇಕ ಕಾರ್ಯಕ್ರಮ ಕೈಗೊಳ್ಳಲಾಗುವುದು. ಜತೆಗೆ, ನಾಲೆಗಳ ಆಧುನೀಕರಣವನ್ನೂ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಾಗಿನ ಅರ್ಪಣೆ ಮಾಡಿದ ಬಳಿಕ ಮಾತನಾಡಿ, ಕಪಿಲಾ ನದಿಯು ಕಾವೇರಿಯ ಪ್ರಮುಖ ಉಪನದಿಯಾಗಿದ್ದು, ತಿ.ನರಸೀಪುರದಲ್ಲಿ ಕಾವೇರಿಯೊಂದಿಗೆ ಕಪಿಲಾ ಸಂಗಮವಾಗುತ್ತದೆ. 1.13 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸಿಕೊಡುತ್ತದೆ. ಪ್ರತಿ ವರ್ಷದಂತೆ ಜಲಾಶಯ ತುಂಬಿದಾಗ ಬಾಗಿನ ಅರ್ಪಿಸಲಾಗಿದ್ದು, ರೈತರಿಗೆ ಒಳ್ಳೆಯದಾಗಲೆಂದು ಕಪಿಲಾ ಮಾತೆಗೆ ಪ್ರಾರ್ಥಿಸಲಾಗಿದೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಕಬಿನಿ ಜಲಾಶಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಹೇಳಿದರು.

ಕಪಿಲಾ ನದಿಯೂ ನಮಗೆ ಜೀವನದಿ.

ಸಂಕಷ್ಟ ಕಾಲದಲ್ಲಿ ಈ ನದಿ ನಮ್ಮ ಗೌರವ-ಮರ್ಯಾದೆ ಉಳಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿಲ್ಲದೆ ಇದ್ದಾಗ, ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸಬೇಕು ಎನ್ನುವ ತೀರ್ಪುಗಳು ಬಂದ ಸಮಯದಲ್ಲಿ ಸೇರಿದಂತೆ ಎಲ್ಲ ಸಂಕಷ್ಟ ಕಾಲದಲ್ಲೂ ಕಪಿಲಾ ನದಿಯಿಂದ ನೀರು ಹರಿಸಲಾಗಿದೆ ಎಂದು ಕಬಿನಿ ಜಲಾಶಯದ ಕೊಡುಗೆಯನ್ನು ಸ್ಮರಿಸಿದರು.

ಕಬಿನಿ ಉತ್ಸವ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಜಿಲ್ಲಾ ಸಚಿವರು ಹಾಗೂ ಇತರರೊಂದಿಗೆ ಚರ್ಚೆ ಮಾಡಲಾಗುವುದು. ಕಬಿನಿ ಉತ್ಸವ, ಕಾವೇರಿ ಆರತಿ ಮಾಡಲು ನಾವು ಚರ್ಚೆ ಮಾಡುತ್ತಿದ್ದು, ಈ ಕಾರ್ಯಕ್ರಮಗಳ ಮೂಲಕ ಪ್ರವಾಸೋದ್ಯಮ ಆಕರ್ಷಣೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ಹೇಳಿದರು.