ಜಿಲ್ಲೆ

ಕಬಿನಿ ಜಲಾಶಯದಿಂದ 15 ದಿನ ಮಾತ್ರ ಕೃಷಿಗೆ ನೀರು

ಮೈಸೂರು: ಕಬಿನಿ ಜಲಾಶಯದಿಂದ ಕಟ್ಟು ನೀರು ಪದ್ಧತಿಯ(15 ದಿನಕ್ಕೆ ನೀರನ್ನು ಹರಿಸಿ, 15 ದಿನ ಕಾಲ ನೀರನ್ನು ನಿಲ್ಲಿಸುವ) ಪ್ರಕಾರ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.


ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಪ್ರಸಕ್ತ ಮುಂಗಾರು ಹಂಗಾಮಿಗೆ ನೀರು ಒದಗಿಸುವ ಕುರಿತು ನಗರದ ಕಾಡಾ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಕಬಿನಿ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.


ಶನಿವಾರ ಮಧ್ಯರಾತ್ರಿಯಿಂದಲೇ ಅಕ್ಟೋಬರ್‌ವರೆಗೆ ಕಾಲುವೆಗೆ ನೀರು ಬಿಡುಗಡೆ ಮಾಡಲಾಗುತ್ತದೆ. ಅರೆನೀರಾವರಿ ಪ್ರದೇಶಕ್ಕೆ ಮಾತ್ರ ನೀರು ಕೊಡಲಾಗುತ್ತದೆ. ಭತ್ತ ಬೆಳೆಗೆ ನೀರಿಲ್ಲ. ಇದರ ಬದಲಾಗಿ ರಾಗಿ, ಜೋಳ ಇನ್ನಿತರ ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರಿಗೆ ಸೂಚಿಸಲಾಗಿದೆ.
ಸೂಕ್ತವಾಗಿ ನಿರ್ವಹಿಸಿ: ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆಯಾಗಿದೆ. ಕಬಿನಿ ಜಲಾಶಯದಲ್ಲೂ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗಿಲ್ಲ. ರೈತರು ಬೆಳೆದಿರುವ ಎಲ್ಲ ಬೆಳೆಗಳಿಗೆ ಪೂರ್ಣಪ್ರಮಾಣ ನೀರು ನೀಡುವ ಆಸೆ ಇದೆ. ಆದರೆ, ಅಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆ ಇಲ್ಲ. ಆದ್ದರಿಂದ ಕಟ್ಟು ಪದ್ಧತಿಯನ್ನು ನೀರು ಹರಿಸಲಾಗುವುದು ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಭೆಯಲ್ಲಿ ತಿಳಿಸಿದರು.


ಸೂಕ್ತ ರೀತಿಯಲ್ಲಿ ಜಲನಿರ್ವಹಣೆ ಮಾಡಬೇಕು. ಕೊನೆ ಭಾಗಕ್ಕೂ ನೀರು ಹರಿಯುವಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ಈ ಮೂಲಕ ಸಮರ್ಪಕವಾಗಿ ನೀರು ಹಂಚಿಕೆ ಆಗುವಂತೆ ಕ್ರಮವಹಿಸಬೇಕು. ಏನಾದರೂ ಸಮಸ್ಯೆಯಾದರೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ನೆರವು ಪಡೆದುಕೊಳ್ಳಬೇಕು ಎಂದು ನೀರಾವರಿ ಇಲಾಖೆಯ ಇಂಜಿನಿಯರ್‌ಗಳಿಗೆ ಸಚಿವರು ಸೂಚಿಸಿದರು.


ಕಬಿನಿ ಜಲಾಶಯದಲ್ಲಿ (ಆ.12ಕ್ಕೆ) 18.04 ಟಿಎಂಸಿ ನೀರು ಸಂಗ್ರಹ ಇದೆ. ಇದರಲ್ಲಿ 8.23 ಟಿಎಂಸಿ ಉಪಯುಕ್ತ ಸಂಗ್ರಹ ನೀರಾಗಿದೆ. ಜುಲೈ 27ರಿಂದ ಆ.5ರ ವರೆಗೆ 10 ದಿನಗಳ ಅವಧಿಗೆ ಕೆರೆ-ಕಟ್ಟೆಗಳನ್ನು ತುಂಬಿಸಲು ಪ್ರತಿ ದಿನಕ್ಕೆ 1500 ಕ್ಯೂಸೆಕ್‌ನಂತೆ 1.29 ಟಿಎಂಸಿ ನೀರನ್ನು ಹರಿಸಲಾಗಿದೆ ಎಂದು ಕಬಿನಿ ಮತ್ತು ವರುಣ ನಾಲೆ ವೃತ್ತದ ಅಧೀಕ್ಷಕ ಇಂಜಿನಿಯರ್ ಶಿವಮಹದೇವಯ್ಯ ತಿಳಿಸಿದರು.


ಜಲಾಶಯದಿಂದ 1.08 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕಾಗಿದೆ. ಕಬಿನಿ ಬಲ ಮತ್ತು ಎಡದಂಡೆ ನಾಲೆಗಳಲ್ಲಿ 2,390 ಕ್ಯೂಸೆಕ್, ಕುಡಿಯುವ ಸಲುವಾಗಿ ಮತ್ತು ಅಣೆಕಟ್ಟು ನಾಲೆಗೆ 900 ಕ್ಯೂಸೆಕ್ ನೀರನ್ನು 120 ದಿನಗಳ ಅವಧಿಗೆ ಹರಿಸಲು 30 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ, ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನಂತೆ ಕಬಿನಿ ನಾಲೆಗಳಿಗಾಗಿ 11.99 ಟಿಎಂಸಿ ಮತ್ತು ಅಣೆಕಟ್ಟು ನಾಲೆಗಳಿಗಾಗಿ 2.86 ಟಿಎಂಸಿ ಸೇರಿದಂತೆ 14 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದು ಮಾಹಿತಿ ನೀಡಿದರು.


ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಕಳೆದ 10 ವರ್ಷಗಳಲ್ಲಿ ಅತಿ ಕಡಿಮೆ ಇರುವ ಒಳಹರಿವಿನ ಶೇ.50ರಷ್ಟು ಗಣನೆಗೆ ತೆಗೆದುಕೊಂಡು ಲೆಕ್ಕಾಚಾರ ಮಾಡಲಾಗಿದೆ. ಆ ಪ್ರಕಾರ ನಾಲೆಗಳಿಗೆ ಒಟ್ಟಾರೆಯಾಗಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು. ಉತ್ತಮ ಮಳೆಯಾದಲ್ಲಿ ಡಿಸೆಂಬರ್‌ರ ಅಂತ್ಯದವರೆಗೂ ನೀರನ್ನು ಹರಿಸಬಹುದಾಗಿದೆ ಎಂದು ತಿಳಿಸಿದರು.


ಪ್ರಸ್ತುತ ಜಲಾಶಯದ ನೀರಿನ ಶೇಖರಣೆ ಪ್ರಮಾಣದಲ್ಲಿ ಆಗಸ್ಟ್ ತಿಂಗಳಿನಿಂದ 2024ರ ಮೇ ವರೆಗೂ ಬೇಸಿಗೆ ಕಾಲಕ್ಕೆ ಬೆಂಗಳೂರು, ಮೈಸೂರು, ಇತರ ತಾಲೂಕು ವ್ಯಾಪ್ತಿಗೆ ಕುಡಿಯುವ ನೀರಿಗೆ ಆದ್ಯತೆಯಾಗಿದ್ದು, ಅದಕ್ಕಾಗಿ ಜಲಾಶಯದಿಂದ 6.13 ಟಿಎಂಸಿ ನೀರನ್ನು ನೀಡಬೇಕಾಗಿದೆ ಎಂದು ಶಿವಮಹದೇವಯ್ಯ ಮನವರಿಕೆ ಮಾಡಿಕೊಟ್ಟರು.

ಕೊಳ್ಳೇಗಾಲ ಭಾಗಕ್ಕೆ ಸಮಸ್ಯೆ ಆಗಲಿದೆ:
ಕೊಳ್ಳೇಗಾಲ ಭಾಗದವರೆಗೂ ಕಬಿನಿ ನೀರು ತಲುಪಬೇಕಾದರೆ ನಿರಂತರವಾಗಿ 45 ದಿನಗಳ ವರೆಗೆ ಕಾಲುವೆಗೆ ನೀರು ಹರಿಸಬೇಕು. 15 ದಿನಗಳ ಕಟ್ಟು ಪದ್ಧತಿಯಲ್ಲಿ ನೀರು ಕೊಟ್ಟರೆ ಈ ಭಾಗಕ್ಕೆ ಜಲವೇ ದೊರೆಯುವುದಿಲ್ಲ. ಇದರಿಂದ ಸಮಸ್ಯೆ ಆಗಲಿದೆ. ಜತೆಗೆ, ತಮಿಳುನಾಡಿಗಿಂತ ನಮ್ಮ ರೈತರಿಗೆ ನೀರು ಕೊಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಆಗ್ರಹಿಸಿದರು.
ಚಾಮರಾಜನಗರ ಜಿಲ್ಲೆಯ ನೀರಾವರಿ ಇಲಾಖೆ ಬಹಳಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ಸಮಸ್ಯೆ ಆಗಿದೆ. ಮೈಸೂರಿನಲ್ಲಿ ಹೆಚ್ಚುವರಿ ಇಂಜಿನಿಯರ್‌ಗಳನ್ನು ಇಲ್ಲಿಗೆ ವರ್ಗಾವಣೆ ಮಾಡಬೇಕು ಎಂದೂ ಆಗ್ರಹಿಸಿದರು.

ಶಾಸಕರಾದ ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಮೈಸೂರು ಡಿಸಿ ಡಾ.ಕೆ.ವಿ.ರಾಜೇಂದ್ರ, ಚಾಮರಾಜನಗರ ಡಿಸಿ ಶಿಲ್ಪಾನಾಗ್, ಕಾವೇರಿ ನೀರಾವರಿ ನಿಗಮದ ದಕ್ಷಿಣ ವಲಯದ ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್, ಮೈಸೂರು ಜಿಪಂ ಉಪಕಾರ್ಯದರ್ಶಿ ಸರಸ್ವತಿ ಇತರರು ಇದ್ದರು.


ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತೇವೆ
ಈ ಸಲ ಮಳೆ ಕಡಿಮೆಯಾಗಿದೆ. ಭತ್ತ ಸೇರಿದಂತೆ ಇನ್ನಿತರ ಬೆಳೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಕೊಡಬೇಕು. ಇಲ್ಲವಾದರೆ ಬೆಳೆ ನಷ್ಟವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂದು ರೈತರು ಅಹವಾಲು ಸಲ್ಲಿಸಿದರು. ಅಭಿಪ್ರಾಯ ಪಡೆದ ಬಳಿಕ ಅವರನ್ನು ಹೊರಗೆ ಕಳುಹಿಸಿ ಸಭೆಯನ್ನು ಮುಂದುವರಿಸಲಾಯಿತು.

ಹೂಳು ತುಂಬಿರುವ ಕಾಲುವೆಗಳು
ಬಹುತೇಕ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ. ಹೀಗಾಗಿ, ನೀರು ಸರಾಗವಾಗಿ ಹರಿದು ಮುಂದಕ್ಕೆ ಹೋಗುತ್ತಿಲ್ಲ ಎಂದು ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ಇದಕ್ಕೆ ಧ್ವನಿಗೂಡಿಸಿದ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ನಾಲೆಗಳು ಜಂಗಲ್ ರೀತಿ ಆಗಿವೆ. ಗಿಡಗಂಟಿಗಳು ಬೆಳೆದುಕೊಂಡಿದೆ. ಇದನ್ನು ತೆರವುಗೊಳಿಸಿ ಕಾಲುವೆಗಳನ್ನು ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.