ಮೈಸೂರು: ತುಂಬಿ ಹರಿಯುತ್ತಿರುವ ಜಿಲ್ಲೆಯ ಜೀವನಾಡಿ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರು. ಜತೆಗೆ 32.25 ಕೋಟಿ ರೂ. ವೆಚ್ಚದ ಅಣೆಕಟ್ಟೆ ಪುನಶ್ಚೇತನ ಕಾಮಗಾರಿಗೂ ಶಿಲಾನ್ಯಾಸ ನೆರವೇರಿಸಿದರು.
ಹೂವುಗಳಿಂದ ಸಿಂಗಾರಗೊಂಡಿದ್ದ ಜಲಾಶಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆದವು. ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿ ಶೇಖರ್ ದೀಕ್ಷಿತ್, ಎಚ್.ಡಿ.ಕೋಟೆ ತಾಲೂಕಿನ ಕಿತ್ತೂರ ಗ್ರಾಮದ ರವಿರಾಮೇಶ್ವರ ದೇವಸ್ಥಾನದ ಅರ್ಚಕ ಭಾಸ್ಕರ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ, ಕನ್ಯಾ ಲಗ್ನ, ಅಭಿಜಿನ್ ಮುಹೂರ್ತದಲ್ಲಿ ಕಪಿಲಾ ಮಾತೆಗೆ ಪೂಜೆ ಸಲ್ಲಿಸಿ, ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು.
ವೆುಸೂರು ನಗರದಲ್ಲೇ ವಾಸ್ತವ್ಯ ಹೂಡಿದ್ದ ಸಿಎಂ, ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಗೆ ಆಗಮಿಸಿದರು.
ಅಲ್ಲಿಂದ ಐರಾವತ ಬಸ್‌ನಲ್ಲಿ ಜಲಾಶಯಕ್ಕೆ ಬಂದ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಪೂರ್ಣಕುಂಭ ಹೊತ್ತ ಮಹಿಳೆಯರ ಸಡಗರ, ಯಕ್ಷಗಾನ ಕಲಾವಿದರ ಕಲರವ, ನಾದಸ್ವರ, ಚಂಡೆ ಮೇಳ, ಕಥಕ್ಕಳಿ ನೃತ್ಯವೂ ಮೆರುಗು ನೀಡಿತು.
ನವಧ್ಯಾನ್ಯ, ಅರಿಶಿನ-ಕುಂಕುಮ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿ ಒಳಗೊಂಡ ಬಿದಿರಿನ ಮೊರಕ್ಕೆ ಹೂವು ಹಾಕಿ, ಕರ್ಪೂರದ ಆರತಿ ಬೆಳಗಲಾಯಿತು. ಸ್ಥಳೀಯ ಶಕ್ತಿ ದೇವತೆಯಾದ ಚಿಕ್ಕಮ್ಮದೇವಿ ಹಾಗೂ ಆಕೆಯ ಆರು ಜನ ಸಹೋದರಿಯರ ಪ್ರತಿರೂಪ ಕಳಶಗಳಿಗೆ ಪೂಜೆ ಮಾಡಿ, ಏಳು ಬಾಗಿನ ಸಿದ್ಧಗೊಳಿಸಲಾಯಿತು.
ಅಣೆಕಟ್ಟೆಯ ಕಾವಲು ಗೋಪುರದ ಬಳಿ ಬೆಳಗ್ಗೆ 11.16ಕ್ಕೆ ಬಾಗಿನವನ್ನು ಕಣ್ಣಿಗೆ ಒತ್ತಿಕೊಂಡು ನಮಸ್ಕರಿಸಿದ ಬಳಿಕ ಸಿಎಂ ಕಬಿನಿ ಜಲಾಶಯಕ್ಕೆ ಸಮರ್ಪಿಸಿದರು. ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹ ಬಾಗಿನ ಅರ್ಪಿಸಿ ಕಪಿಲಾ ನದಿಗೆ ಕೈಮುಗಿದರು. ಬಳಿಕ ವಿವಿಧ ಹೂವುಗಳನ್ನು ಕಪಿಲೆಯ ಮಡಿಲಿಗೆ ಅರ್ಪಿಸಿದರು.
ಪ್ರಸ್ತಕ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲೇ ಮೊದಲು ತುಂಬಿರುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಬಿನಿ ಡ್ಯಾಂ ಕಳೆದ ಜೂನ್ ಮೊದಲ ವಾರದಲ್ಲೇ ಭರ್ತಿಯಾಗಿತ್ತು. ಅಣೆಕಟ್ಟೆಯ ಗರಿಷ್ಠ ಮಟ್ಟ 2,284 ಅಡಿ ಇದ್ದು, ಇಂದಿನ ಮಟ್ಟ 2,283.33 ಅಡಿ ಇತ್ತು. 15,206 ಸಾವಿರ ಕ್ಯೂಸೆಕ್ ಒಳಹರಿವಿತ್ತು. ಇಂದು ಹೊರ ಹರಿವಿನ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲಾಗಿತ್ತು.
ಮೊದಲ ಬಾರಿಗೆ ಕೆಆರ್‌ಎಸ್ ಬಾಗಿನ ಅರ್ಪಿಸಿ 20 ದಿನಗಳ ಬಳಿಕ ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.
ಈ ಹಿಂದೆ ಒಂದೇ ದಿನದಲ್ಲಿ ಕಬಿನಿ, ಕೆಆರ್‌ಎಸ್‌ನಲ್ಲಿ ಬಾಗಿನ ಅರ್ಪಣೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿತ್ತು. ಇದೇ ಮೊದಲ ಬಾರಿಗೆ ಜೂ. 30ರಂದು ಕೆಆರ್‌ಎಸ್‌ಯಲ್ಲಿ ಕಾವೇರಿ ತಾಯಿಗೆ ಬಾಗಿನ ಅರ್ಪಣೆ ಮಾಡಿ ಕಬಿನಿಗೆ ಸಲ್ಲಿಸುವ ಸಂಪ್ರದಾಯವನ್ನು ಮರೆಯಲಾಗಿತ್ತು. ಇದು ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಕಬಿನಿಗೆ ತಡವಾಗಿ ಬಾಗಿನ ಅರ್ಪಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಅವಕಾಶ ಪುನರಾವರ್ತನೆ ಆಗಲು ಮಾದರಿ ಕಲ್ಪಿಸಿಕೊಟ್ಟಂತಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ್, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್‌ರೆಡ್ಡಿ, ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ, ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಇನ್ನಿತರರಿದ್ದರು. ಚಾಮರಾಜನಗರ ಸಂಸದ ಸುನೀಲ್ ಬೋಸ್ ಗೈರಾಗಿದ್ದರು.
ಜಲಾಶಯಕ್ಕೆ ಸಿಎಂ, ಸಚಿವರು, ಶಾಸಕರು, ಕೆಲ ಅಧಿಕಾರಿ ವರ್ಗದರು ಐರಾವತ ಬಸ್‌ನಲ್ಲಿ ಆಗಮಿಸಿದರು. ಕಾರುಗಳು ಜಲಾಶಯದ ಏರಿ ಮೇಲೆ ಬಂದರೆ ಒತ್ತಡ ಉಂಟಾಗುತ್ತದೆ ಎನ್ನುವ ಕಾರಣದಿಂದ ಬೀಚನಹಳ್ಳಿಯ ಪರಿವೀಕ್ಷಣಾ ಮಂದಿರ (ಐಬಿ) ಬಳಿ ನಿಲುಗಡೆ ಮಾಡಲಾಗಿತ್ತು. ಬಸ್‌ನಲ್ಲಿ ಬಂದು, ಮತ್ತೆ ಅದೇ ಬಸ್‌ನಲ್ಲಿ ವಾಪಸ್ ತೆರಳಿದರು. ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ಇರಲಿಲ್ಲ. ಇದರಿಂದ ಜನಜಂಗುಳಿಯೂ ಇರಲಿಲ್ಲ. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಜಲಾಶಯದ ಪ್ರವೇಶದ್ವಾರದಿಂದ ಶುರುವಾಗಿ ಕೊನೆಯ ಭಾಗದವರೆಗೂ ಕನ್ನಡ ಬಾವುಟಗಳು ಕಂಗೊಳಿಸಿದವು. ತಾಯಿ ಭುವನೇಶ್ವರಿ ಚಿತ್ರವನ್ನು ಹೊಂದಿದ್ದ ಬಾವುಟದಲ್ಲಿ ‘ಕನ್ನಡ ಉಳಿಸಿ, ಕನ್ನಡ ಬೆಳೆಸಿ’ ಎಂಬ ಘೋಷ ವಾಕ್ಯ ಶೋಭಿಸಿತು. ಇದಲ್ಲದೆ ಚೆಂಡು, ಮಲ್ಲಿಗೆ ಹೂವಿನ ಹಾರದಿಂದ ಜಲಾಶಯದ ಏರಿಯನ್ನು ಅಲಂಕರಿಸಲಾಗಿತ್ತು.