ಜಿಲ್ಲೆ

ಕಬಿನಿ ಜಲಾಶಯಕ್ಕೆ ಅಪಾಯ ಇಲ್ಲ: ಶಾಸಕ ಅನಿಲ್ ಚಿಕ್ಕಮಾದು ಸ್ಪಷ್ಟನೆ

ಮೈಸೂರು: ಕಬಿನಿ ಜಲಾಶಯಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಅನಿಲ್ ಚಿಕ್ಕಮಾದು ಸ್ಪಷ್ಟಪಡಿಸಿದರು.

ಕಬಿನಿ ಬಲದಂಡೆ ನಾಲೆ ಸೋರಿಕೆ ವಿಚಾರ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದು ಡ್ಯಾಮ್‌ನಲ್ಲೂ ಸೀಪೇಜ್ ಆಗುವಂತಹದ್ದು ಇದೆ. ಸೀಪೇಜ್ ತಡೆಯಲು ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಧಿಕಾರಿಗಳು ಡ್ಯಾಮ್ ನಿರ್ವಹಣೆ ಮಾಡಿಲ್ಲ ಎಂದಿದ್ದರೆ ಇಷ್ಟೊತ್ತಿಗೆ ಡ್ಯಾಮ್ ಉಳಿಯುತ್ತಿರಲಿಲ್ಲ ಎಂದರು.

ರಾಜ್ಯದಲ್ಲಿ ಮೊದಲು ಕಬಿನಿ ಭರ್ತಿ ಆಗಿದ್ದು, ಡ್ಯಾಮ್‌ನಿಂದ 5 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಕಬಿನಿ ಡ್ಯಾಮ್ ಕಾಮಗಾರಿಗೆ 600 ಕೋಟಿ ರೂ. ಅನುದಾನ ಬೇಕಿದೆ. ಈ ಬಗ್ಗೆ ಸಿಎಂ, ಡಿಸಿಎಂ ಬಳಿ ಮನವಿ ಮಾಡಿದ್ದು, 130 ಕೋಟಿ ರೂ. ಬಳಿಕ ಮತ್ತೆ 32 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

ಕಬಿನಿ ಡ್ಯಾಮ್ ಈಗಿನ ಸರ್ಕಾರಗಳು ಕಟ್ಟಿಲ್ಲ. ಕಬಿನಿ ಕಟ್ಟಿ 50 ವರ್ಷ ಆಗಿದೆ. ಯಾವಾಗಲೂ ಬರಗಾಲ ಅಂಥ ರೈತರು ಹೇಳುತ್ತಿದ್ದರು. ನಾನು ಶಾಸಕನಾಗಿ ಏಳು ವರ್ಷಗಳು ಆಗಿವೆ. ಏಳು ವರ್ಷದಲ್ಲಿ ಯಾವುದೇ ಬರಗಾಲ ಬಂದಿಲ್ಲ. ಏಳು ವರ್ಷದಿಂದಲೂ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುತ್ತ ಬರುತ್ತಿದ್ದು, ಮುಂದಿನ ತಿಂಗಳು ಸಿಎಂ ಕರೆಸಿ ಬಾಗಿನ ಅರ್ಪಿಸಲಾಗುವುದು ಎಂದರು.

ರೈತರ ಕೃಷಿ ಜಮೀನುಗಳಿಗೆ ಯಾವಾಗ ನೀರು ಬಿಡಬೇಕು, ಎಷ್ಟು ಬಿಡಬೇಕು ಅಂಥ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದರು.

ಸಿಎಂ, ಡಿಸಿಎಂ ಹುದ್ದೆಗೆ ಯಾವುದೇ ಸಮಸ್ಯೆ ಇಲ್ಲ. ಮುಂದಿನ ಐದು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ಮುಂದಿನ ಸಲವೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ಆರ್‌ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ ಘಟನೆಗೆ ಸರ್ಕಾರವೇ ನೇರ ಹೊಣೆ ಅನ್ನೋದು ತಪ್ಪು. ಪ್ರತಿಪಕ್ಷಗಳಿಗೆ ಯಾವುದೇ ಕೆಲಸ ಇಲ್ಲ. ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಆದ ಲೋಪದೋಷಕ್ಕೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಅಹಮದಾಬಾದ್‌ನಲ್ಲಿ ವಿಮಾನ ಪತನ ಆಯಿತು. ಅಲ್ಲಿನ ಸಿಎಂ ರಾಜೀನಾಮೆ ಕೊಡ್ತಾರಾ? ಇಲ್ಲ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದರು.

ನಿರ್ಗಮಿತಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ ಅವರನ್ನು ಕಮಿಷನರ್ ಮಾಡಿದ್ದು ಯಾವ ಸರ್ಕಾರ ಅಂತ ಸಮುದಾಯವರು ತಿಳಿದುಕೊಳ್ಳಬೇಕು. ಹಿಂದುಳಿದ ವರ್ಗದವರನ್ನು ಕಮಿಷನರ್ ಹುದ್ದೆಗೆ ಕೂರಿಸೋದು ಸುಲಭವಲ್ಲ. ಅಂತಹ ಕೆಲಸ ಸಿಎಂ ಮಾಡಿದ್ದರು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.

ಲೋಪದೋಷ ಆಗಿದ್ದರಿಂದ ಕ್ರಮ ತೆಗೆದುಕೊಂಡಿರೋದು ತಪ್ಪಿಲ್ಲ. ಕೇವಲ ನಮ್ಮ ಸಮುದಾಯ ಮಾತ್ರ ಅಲ್ಲ. ಎಲ್ಲ ಸಮುದಾಯದ ಅಧಿಕಾರಿಗಳು ಇದ್ದಾರೆ. ನಮ್ಮ ಸಮಾಜವನ್ನು ಮಾತ್ರ ಟಾರ್ಗೆಟ್ ಮಾಡಿಲ್ಲ. ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.

ಡಿಸೆಂಬರ್ ವೇಳೆಗೆ ಸಚಿವ ಸಂಪುಟ ಪುನಾರಚನೆ ಮಾಡಬೇಕೆಂಬುದು ತೀರ್ಮಾನ ಆಗಿದೆ. ಅವಕಾಶ ಸಿಕ್ಕರೆ ಸರ್ಕಾರಕ್ಕೆ ಕೆಲಸ ಮಾಡಲು ತಯಾರಿದ್ದೇನೆ ಎಂದರು.