ಜಿಲ್ಲೆ

ಕಬಿನಿ ಎರಡನೇ ಹಂತ ಜಾರಿಗೊಳಿಸಿ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ೆ.15ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ರೈತ ಸಂಘದ ಮುಖಂಡರು ಒತ್ತಾಯ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ಮುಂದೆ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್‌ಪ್ರಭು ಮಾತನಾಡಿ, ಸಲ್ ಬೀಮಾ ಯೋಜನೆಯನ್ನು ರೈತರು ಬೆಳೆಯುವ ಎಲ್ಲ ಬೆಳೆಗಳಿಗೂ ವರ್ಷಪೂರ್ತಿ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಕರ ನಿರಾಕರಣೆಯ ಸಂದರ್ಭದಲ್ಲಿ ಉಳಿಸಿಕೊಂಡಿರುವ ಗೃಹ ಬಳಕೆ ವಿದ್ಯುತ್ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಕಬಿನಿ 2ನೇ ಹಂತದ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು. ಸುವರ್ಣಾವತಿ ನದಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಸರಬರಾಜನ್ನು ನೀರಾವರಿ ಶಿಸ್ತಿಗೆ ಒಳಪಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ರೈತರ ಜಮೀನಿಗೆ ಹೋಗಲು ನೀರಾವರಿ ಇಲಾಖೆ ಮತ್ತು ಕಾಡಾ ಇಲಾಖೆಗಳಿಂದ ರಸ್ತೆ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ನೀಡಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಗೋಮಾಳಗಳಲ್ಲಿ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ದೂರಿದರು. ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕಾಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರ ಹಣವನ್ನು ಕೊಟ್ಟಿಲ್ಲ. ಚಾಮುಲ್‌ನಿಂದ 53 ಕೋಟಿ ರೂ.ಗಳನ್ನು ಮಂಜೂರು ಮಾಡಬೇಕು. ನವೆಂಬರ್‌ನಲ್ಲಿ ಹಾಲು ಖರೀದಿ ದರ ಪರಿಷ್ಕರಣೆ ಮಾಡಿ 1 ರೂ. ಕಡಿಮೆ ಮಾಡಿದ್ದು, ಪರಿಷ್ಕರಣೆ ದರವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಅಕ್ಕ-ಪಕ್ಕದ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು. ಹನೂರಿನ ಚಂಗಡಿ ಗ್ರಾಮವನ್ನು ಶೀಘ್ರವಾಗಿ ಸ್ಥಳಾಂತರ ಮಾಡಬೇಕು. ಜಿಲ್ಲೆಯಲ್ಲಿ ಕೋಲ್ಡ್‌ಸ್ಟೋರೇಜ್ ಘಟಕ ನಿರ್ಮಾಣ ಮಾಡಬೇಕು ಎಂದರು.

ಇದಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯೆ ನೀಡಿ, ಗೋಮಾಳಗಳಲ್ಲಿ ಹೊಸದಾಗಿ ಗಣಿಗಾರಿಕೆ ಮಾಡಲು ಅವಕಾಶಗಳನ್ನು ನೀಡುತ್ತಿಲ್ಲ ಎಂದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಸತ್ತೇಗಾಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ. ರೈತರಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಗಳಿವೆ. ಜ.13ರಿಂದ ಚಿಕ್ಕಲ್ಲೂರು ಜಾತ್ರೆ ಆರಂಭಗೊಳ್ಳಲಿದ್ದು, ಅಪಘಾತ ಸಂಭವಿಸಿದರೆ ಭಕ್ತರು ಪ್ರಾಣ ಕಳೆದುಕೊಳ್ಳಲಿದ್ದಾರೆ. ಇಂಡಿಗನತ್ತ ಗ್ರಾಮದ ವಿದ್ಯಾರ್ಥಿಗಳು ಬಸ್ ಸೌಲಭ್ಯವಿಲ್ಲದೆ 12 ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲಿ ಶಾಲೆಗೆ ಬರುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಭಾಗದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಉತ್ತರಿಸಿ ಸತ್ತೇಗಾಲ ಬಳಿಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಪರಿಹರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಲಾಗುವುದು. ಇಂಡಿಗನತ್ತ ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ವಾಹನ ಸೌಲಭ್ಯ ನೀಡಲಾಗಿತ್ತು. ಇದನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ೆ.13ರ ಬದಲು ೆ.15ರಂದು ಸಚಿವ ಸಂಪುಟ ಸಭೆ ನಡೆಯಲಿದೆ. ರೈತರು ನೀಡುತ್ತಿರುವ ಅಗತ್ಯತೆಗಳ ಪಟ್ಟಿಗಳನ್ನು ಈಗಾಗಲೇ ನಾವೂ ಸಹ ಸಿದ್ಧಪಡಿಸಿದ್ದೇವೆ ಎಂದರು.

ಇದೇ ವೇಳೆ ರಾಜ್ಯಮಟ್ಟದ ಯುವ ಜನೋತ್ಸವದ ಕಾರ್ಯಕ್ರಮದಲ್ಲಿ ತೃತೀಯ ಬಹುಮಾನ ಪಡೆದ ಗುರುರಾಜ್ ಮತ್ತು ತಂಡವನ್ನು ಸಚಿವರು ಮತ್ತು ಶಾಸಕರು ಅಭಿನಂದಿಸಿದರು. ಸಭೆಯಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ತಿನ ಸದಸ್ಯ ಡಾ. ಡಿ. ತಿಮ್ಮಯ್ಯ, ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ (ಮುನ್ನಾ), ರೈತ ಮುಖಂಡರಾದ ಶಿವಪುರ ಮಹದೇವಪ್ಪ, ಭಾಸ್ಕರ್, ಅರ್ಪುತರಾಜ್, ಡೇವಿಡ್, ಲಾರೆನ್ಸ್, ಯಶವಂತ, ಮತ್ತು ಇತರರು ಹಾಜರಿದ್ದರು.

ರೈತರ ಸಭೆ ಕರೆಯಲು ಒತ್ತಾಯ:

ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ರೈತರ ಸಭೆಯನ್ನು ಕರೆಯಬೇಕೆಂದು ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಒತ್ತಾಯಿಸಿದರು. ಜಿಲ್ಲೆಯ ಅಭಿವೃದ್ಧಿ ಮತ್ತು ರೈತರ ಬೇಡಿಕೆಗಳ ಪಟ್ಟಿಯನ್ನು ಸರ್ಕಾರದ ಮುಂದಿಡಲು ಸಭೆ ಕರೆದು ಎಲ್ಲರ ಬಳಿಯೂ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದರು.

ಖಾಸಗಿ ೈನಾನ್ಸ್ ಹಾವಳಿ:

ಜಿಲ್ಲೆಯಲ್ಲಿ ಖಾಸಗಿ ೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ಸಾಲ ಪಾವತಿ ಮಾಡಲಾಗದ ಜನರು ಊರು ಬಿಡುತ್ತಿದ್ದಾರೆ. ಅವರ ಮಕ್ಕಳು ಶಾಲೆ ಬಿಟ್ಟು ಹೋಗುತ್ತಿದ್ದಾರೆ ಎಂದು ರೈತ ಮುಖಂಡ ಹೆಗ್ಗವಾಡಿ ಮಹೇಶ್‌ಕುಮಾರ್ ಹೇಳಿದರು. ಶಾಲೆ ಬಿಟ್ಟು ಹೋಗಿರುವ ಮಕ್ಕಳನ್ನು ಪತ್ತೆ ಮಾಡಿ ಮರಳಿ ಶಾಲೆಗಳಿಗೆ ಸೇರಿಸಬೇಕು. ಖಾಸಗಿ ೈನಾನ್ಸ್‌ಗಳ ಕಿರುಕುಳ ತಪ್ಪಿಸಬೇಕೆಂದು ಒತ್ತಾಯ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ೈನಾನ್ಸ್ ಕಂಪನಿಗಳೊಂದಿಗೆ ಸಭೆ ನಡೆಸಿದ್ದೇನೆ. ಸಂಜೆ ವೇಳೆ ಮನೆಯ ಬಳಿಗೆ ಹೋಗಿ ಸಾಲ ವಸೂಲಾತಿಗೆ ಪಟ್ಟು ಹಿಡಿಯಬೇಡಿ ಎಂದು ತಿಳಿಸಿದ್ದೇನೆ ಎಂದರು.