ನವಲಗುಂದ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಲ್ಲೆ ಹಾಗೂ ರಾಹುಲ್ ಗಾಂಧಿ ಮೇಲೆ ಪೊಲೀಸರ ದೌರ್ಜನ್ಯ ನಡೆಸಿದ ಘಟನೆ ಖಂಡಿಸಿ ಪಟ್ಟಣದ ಲಿಂಗರಾಜ ಸರ್ಕಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಧರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ ಮಾತನಾಡಿ, ಉತ್ತರಪ್ರದೇಶದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ, ಹಲ್ಲೆ ನಡೆಸಿದ ಘಟನೆ ಅಮಾನವೀಯವಾಗಿದೆ. ಇನ್ನೂ ಅತ್ಯಾಚಾರಕ್ಕೊಳಗಾದ ಯುವತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರು ತಡೆದು ಪೊಲೀಸರ ದೌರ್ಜನ್ಯ ನಡೆಸಿದಿದ್ದಾರೆ. ಉತ್ತರ ಪ್ರದೇಶ ಸರ್ಕಾರ ರಾಕ್ಷಸ ಪ್ರವೃತ್ತಿಯುಳ್ಳದ್ದಾಗಿದೆ. ಅಲ್ಲಿನ ದಮನಕಾರಿ, ಸರ್ವಾಧಿಕಾರಿ ಆಡಳಿತ ಧೋರಣೆ ಖಂಡಿಸುತ್ತೇನೆ ಎಂದರು.
ತಾ.ಪಂ. ಅಧ್ಯಕ್ಷೆ ಅನ್ನಪೂರ್ಣ ಶಿರಹಟ್ಟಿಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ರಮೇಶ ಮಲದಾಸರ, ಡಿಎಸ್ಎಸ್ ತಾಲೂಕು ಅಧ್ಯಕ್ಷ ನಿಂಗಪ್ಪ ಕೆಲಗೇರಿ, ಶರಣಪ್ಪ ವಾಲ್ಮೀಕಿ, ವೀರನಾರಾಯಣ ಬೆಂತೂರ, ಮಡಿವಾಳಪ್ಪ ಮಡಿವಾಳರ, ಸದುಗೌಡ ಪಾಟೀಲ,ಪುರಸಭೆ ಸದಸ್ಯರಾದ ಮಂಜುನಾಥ ಜಾಧವ, ಉಸ್ಮಾನ ಬಬರ್ಚಿ, ಈರಣ್ಣ ಶಿಡಗಂಟಿ, ಚಾಂದಸಾಬ ಅಣ್ಣಿಗೇರಿ, ಮಾರುತಿ ಸಾಮೋಜಿ, ಶಿವರಾಯಪ್ಪ ಮಾದರ, ಬಸವರಾಜ ನರಗುಂದ ಇದ್ದರು.