ಮುಂಡರಗಿ: ಸುಜಲಾನ್ ಕಂಪನಿ ಪವನ ವಿದ್ಯುತ್ ಯಂತ್ರಗಳ ಕಿಡಿಯಿಂದ ಕಪ್ಪತಗುಡ್ಡಕ್ಕೆ ಬೆಂಕಿ ಬೀಳುತ್ತಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಮತ್ತಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭದ್ರತಾ ಸಿಬ್ಬಂದಿ ಮಂಗಳವಾರ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಬೇಸಿಗೆಯಲ್ಲಿ ಕಪ್ಪತಗುಡ್ಡಕ್ಕೆ ಸುಜಲಾನ್ ಕಂಪನಿಯಿಂದ ಬೆಂಕಿ ಬಿದ್ದು ಅಪಾರ ಸಸ್ಯ ಸಂಪತ್ತು ನಾಶವಾಗುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಭಾನುವಾರ ಸುಜಲಾನ್ ಕಂಪನಿ ಪವನ ವಿದ್ಯುತ್ ಯಂತ್ರದ ಕಿಡಿಯಿಂದ ಕಪ್ಪತಗುಡ್ಡಕ್ಕೆ ಬೆಂಕಿ ಬಿದ್ದಿರುವ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ತಕ್ಷಣ ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸುಜಲಾನ್ ಕಂಪನಿಯ ಭದ್ರತಾ ಸಿಬ್ಬಂದಿಯ ಹತ್ತು ತಿಂಗಳ ಬಾಕಿ ವೇತನ ನೀಡಬೇಕು. ಭದ್ರತಾ ಸಿಬ್ಬಂದಿಯನ್ನು ಸೇವೆಯಿಂದ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರವಿಕಾಂತ ಅಂಗಡಿ ಮಾತನಾಡಿ, 22 ದಿನಗಳಿಂದ ಭದ್ರತಾ ಸಿಬ್ಬಂದಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸೌಜನ್ಯಕ್ಕೂ ತಹಸೀಲ್ದಾರ್ ಸ್ಪಂದಿಸಿಲ್ಲ. ಫೆ. 19ರೊಳಗೆ ಭದ್ರತಾ ಸಿಬ್ಬಂದಿ ಬೇಡಿಕೆಗೆ ಸ್ಪಷ್ಟನೆ ನೀಡಬೇಕು ಎಂದು ಎಚ್ಚರಿಸಿದರು.
15 ನಿಮಿಷ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕಾಗಮಿಸಿದ ಶಿರಸ್ತೇದಾರ್ ಎಸ್.ಎಸ್. ಬಿಚ್ಚಾಲಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಎಸ್.ಕೆ. ನದಾಫ್, ಎನ್.ಟಿ. ಪೂಜಾರ, ರವೀಂದ್ರ ಜವಿ, ವೀರೇಶ ರಾವುತರ, ಮಲ್ಲಣ್ಣ ದೇಸಾಯಿ, ವೀರೇಶ ಕಲಿವಾಳ, ಶಿರಸಪ್ಪ ಬಡಿಗೇರ, ಎನ್.ಕೆ. ಪಾಟೀಲ, ಐ.ಡಿ. ಖತೀಬ್, ಎನ್.ಎಚ್. ಮುಲ್ಲಾ, ಕೆ.ಎಂ. ಮುಂಡರಗಿ ಇತರರು ಪ್ರತಿಭಟನೆಯಲ್ಲಿದ್ದರು.