???????????????????????????????????? 
ಜಿಲ್ಲೆ

ಕಪ್ಪತಗುಡ್ಡ ರಕ್ಷಣೆ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಜನಜನಿತವಾದ ಕಪ್ಪತಗುಡ್ಡ ಅರಣ್ಯ ಅಪಾರ ಖನಿಜ, ಅಪರೂಪದ ಸಸ್ಯ ಸಂಪತ್ತು ಹೊಂದಿದೆ ಎಂದು ಗದಗ ಜಿಲ್ಲೆ ಕಪೋತಗಿರಿ ನಂದಿವೇರಿಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಬಸಯ್ಯ ಶಿವಯ್ಯ ಶಿರೋಳ ದತ್ತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಉಪನ್ಯಾಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
80 ಸಾವಿರ ಎಕರೆ ವಿಸ್ತೀರ್ಣವುಳ್ಳ ಕಪ್ಪತಗುಡ್ಡ ಅರಣ್ಯ ಪ್ರದೇಶದ ಗರ್ಭದಲ್ಲಿ ಅಪಾರ ನೈಸರ್ಗಿಕ ಸಂಪತ್ತಿದೆ. ಕಪ್ಪತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆಗೆ ಬಲ್ದೋಟಾ ಕಂಪನಿ ಸರ್ಕಾರದ ಮೇಲೆ ಒತ್ತಡ ತಂದು ಅರಣ್ಯ ಭೂಮಿ ಕಬಳಿಸುವ ಹುನ್ನಾರ ಈಗಲೂ ನಡೆಸಿರುವುದು ವಿಷಾದನಿಯ. 400ಕ್ಕೂ ಹೆಚ್ಚು ವಿವಿಧ ಔಷಧೀಯ ಗುಣಗಳ ಸಸ್ಯ ಸಂಕುಲ ಇಲ್ಲಿದ್ದು, ಪ್ರತಿವರ್ಷ ಅರಣ್ಯಕ್ಕೆ ಬೆಂಕಿ ಬಿದ್ದು ಸಸ್ಯ ಸಂಕುಲ ಕಣ್ಮರೆಯಾಗುತ್ತಿರುವ ಆತಂಕ ಇದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಏಕೀಕರಣ ಹಾಗೂ ಗೋಕಾಕ ಚಳವಳಿಯಲ್ಲಿ ಮಂಚೂಣಿಯಲ್ಲಿ ನಿಂತು ನ್ಯಾಯ ಒದಗಿಸಿದಂತೆ, ಕಪ್ಪತಗುಡ್ಡದ ರಕ್ಷಣೆಗೆ ಧ್ವನಿ ಎತ್ತಬೇಕು. ಈ ಪ್ರದೇಶದಲ್ಲಿನ ಸಸ್ಯನಿಧಿ, ಜೀವನಿಧಿ ಹಾಗೂ ಖನಿಜ ಸಂಪನ್ಮೂಲಗಳ ಬಗೆಗೆ ಸಂಶೋಧನೆ, ರಕ್ಷಣೆ ಕುರಿತು ದಾಖಲೀಕರಣದ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಆರ್. ರಾಮನಗೌಡರ ಮಾತನಾಡಿ, ಕಪ್ಪತಗುಡ್ಡ ಅರಣ್ಯ ನಾಶದಿಂದ ಭವಿಷ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಜನಜೀವನದ ಬದುಕೇ ದುಸ್ತರವಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ದೌರ್ಜನ್ಯ ಎಸುಗುತ್ತಿರುವುದು ಸರಿ ಅಲ್ಲ. ಪರಿಸರ ಮನುಷ್ಯನ ಆಸೆ ಈಡೇರಿಸುತ್ತದೆ ವಿನಃ ದುರಾಸೆ ಅಲ್ಲ ಎಂದರು.
ದತ್ತಿದಾನಿ ಪ್ರೊ. ಬಿ.ಎಸ್. ಶಿರೋಳ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಿವಾನಂದ ಭಾವಿಕಟ್ಟಿ, ಡಾ. ಜಿನದತ್ತ ಹಡಗಲಿ, ಡಿ.ಎಂ. ಹಿರೇಮಠ, ಡಾ. ಮಲ್ಲಿಕಾರ್ಜುನ ಹಿರೇಮಠ, ಶಿವಶಂಕರ ಹಿರೇಮಠ, ಜಿ.ಬಿ. ಹೊಂಬಳ, ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ನಿಂಗಣ್ಣ ಕುಂಟಿ, ಶಾಮಸುಂದರ ಬಿದರಕುಂದಿ, ಎಸ್.ಬಿ. ಕೊಡ್ಲಿ, ಕೆ.ಎಚ್.ನಾಯಕ, ಎಸ್.ಎಂ. ದಾನಪ್ಪಗೌಡರ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.