ಕೊಪ್ಪಳ: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಸಂತೋಷ ನಾಯಕ ಎಂಬಾತನಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶ ಶಂಕರ ಎಂ.ಜಾಲವಾದಿ ಆದೇಶಿಸಿದ್ದಾರೆ.
ಗದ್ದಿಕೇರಿ ತಾಂಡಾದ ಸಂತೋಷ ನಾಯಕ, ಅಮರೇಶ ನಾಯಕ ಹಾಗೂ ಲಕ್ಷ್ಮೀ ನಾಯಕ ಎಂಬುವರ ಸಹಾಯದಿಂದ ಬಾಲಕಿಗೆ ಕೆಲಸ ಕೊಡಿಸುವುದಾಗಿ 2016ರ ಏ.24ರಂದು ಕೊಪ್ಪಳಕ್ಕೆ ಕರೆಸಿಕೊಂಡಿದ್ದ. ಅಲ್ಲಿಂದ ಬೈಕ್‌ನಲ್ಲಿ ಬೆಂಗಳೂರಿಗೆ ಕರೆದೊಯ್ದು ಬಾಡಿಗೆ ಮನೆಯಲ್ಲಿ ಬಂಧಿಸಿಟ್ಟಿದ್ದ. ತಪ್ಪಿಸಿಕೊಂಡು ಹೋದರೆ ಸಾಯಿಸುವುದಾಗಿ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿವಿಯೋಲೆ, ಕಾಲಿನ ಚೈನು ಕಿತ್ತುಕೊಂಡು ಹಿಂಸೆ ನೀಡಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿ ಅಪಹರಣಕ್ಕೆ ಸಹಕರಿಸಿದ ಅಮರೇಶ ನಾಯಕ ಹಾಗೂ ಲಕ್ಷ್ಮೀ ನಾಯಕರನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ. ಆಗಿನ ಪಿಐ ಸತೀಶ ಪಾಟೀಲ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅತ್ಯಾಚಾರಿ ಗದ್ದಿಕೇರಿ ತಾಂಡಾದ ಸಂತೋಷ ನಾಯಕನಿಗೆ 7 ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದ್ದು, ಇದರಲ್ಲಿ ಬಾಧಿತಳಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಕೃತ್ಯಕ್ಕೆ ಸಹಕರಿಸಿದ ಅಮರೇಶ ನಾಯಕನಿಗೆ 3 ವರ್ಷಗಳ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ಹಾಗೂ ಲಕ್ಷ್ಮೀ ನಾಯಕಗೆ 4 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.