ಜಿಲ್ಲೆ

ಕನ್ನಿಕಂಡ ಶ್ಯಾಂ ಪ್ರಥಮ, ಬಡುವಂಡ ದೇವಯ್ಯ ದ್ವಿತೀಯ ಸ್ಥಾನ

ನಾಪೋಕ್ಲು: ನಾಲ್ನಾಡ್ ಪ್ಲಾಂಟರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ವರ್ಷದ ರಾಜ್ಯ ಮಟ್ಟದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ 0.22 ವಿಭಾಗದಲ್ಲಿ ಕನ್ನಿಕಂಡ ಶ್ಯಾಂ ಪ್ರಥಮ, ಬಡುವಂಡ ದೇವಯ್ಯ ದ್ವಿತೀಯ, ಪುದಿಯೊಕ್ಕಡ ಪೂಣಚ್ಚ ತೃತೀಯ ಸ್ಥಾನ ಪಡೆದರು.


12 ಬೋರ್ ವಿಭಾಗದಲ್ಲಿ ಚೋನಿರ ಸಜನ್ ಪ್ರಥಮ, ಅಜ್ಜೆಟ್ಟಿರ ಸೋಮಯ್ಯ ದ್ವಿತೀಯ, ಮುಂಡಂಡ ರಂಜನ್ ತೃತೀಯ ಸ್ಥಾನ ಗಳಿಸಿದರು. ಏರ್ ರೈಫಲ್ ವಿಭಾಗದಲ್ಲಿ ಪುತ್ತರಿರ ನಂಜಪ್ಪ ಪ್ರಥಮ, ನೆಲ್ಲಿರ ಧನು ದ್ವಿತೀಯ, ಕನ್ನಂಡ ಯತೀಶ್ ತೃತೀಯ ಸ್ಥಾನ ಗಳಿಸಿದರು.


0.22 ವಿಭಾಗದಲ್ಲಿ ವಿಜೇತರಾದವರಿಗೆ ನಬಾರ್ಡ್ ನಿವೃತ್ತ ಡಿಡಿಎಂ ಮುಂಡಂಡ ಸಿ.ನಾಣಯ್ಯ ಅವರು ತಮ್ಮ ತಂದೆ ಚಿಣ್ಣಪ್ಪ ಮತ್ತು ತಾಯಿ ಗೋಪಿ ಪೂವವ್ವ ಅವರ ಜ್ಞಾಪಕಾರ್ಥವಾಗಿ ನೀಡಿರುವ ಪ್ರಥಮ ಬಹುಮಾನ 50 ಸಾವಿರ ರೂ.ನಗದು ಮತ್ತು ಆಕರ್ಷಕ ಟ್ರೋಫಿ, ಮಾಜಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ತಮ್ಮ ತಂದೆ ಎ.ಕೆ.ಸುಬ್ಬಯ್ಯ ಮತ್ತು ತಾಯಿ ಪೊನ್ನಮ್ಮ ಅವರ ಜ್ಞಾಪಕಾರ್ಥವಾಗಿ ನೀಡಿರುವ ದ್ವಿತೀಯ ಬಹುಮಾನ 30 ಸಾವಿರ ರೂ.ನಗದು, ಟ್ರೋಫಿ, ಯವಕಪಾಡಿಯ ಕಾಫಿ ಬೆಳೆಗಾರರಾದ ಪಾಂಡಂಡ ಕಿಶನ್ ಪೂಣಚ್ಚ ಅವರು ನೀಡಿರುವ ತೃತೀಯ ಬಹುಮಾನ 20 ಸಾವಿರ ರೂ.ನಗದು, ಟ್ರೋಫಿ ನೀಡಲಾಯಿತು.


12 ಬೋರ್ ವಿಭಾಗದಲ್ಲಿ ವಿಜೇತರಾದವರಿಗೆ ನೆಲಜಿಯ ಜಯ ಕಾಫಿಯ ಮಂಡೀರ ಜಯ ದೇವಯ್ಯ ನೀಡಿರುವ ಪ್ರಥಮ ಬಹುಮಾನ 20 ಸಾವಿರ ರೂ.ನಗದು ಮತ್ತು ಟ್ರೋಫಿ, ಯವಕಪಾಡಿಯ ಅಂಜಪರವಂಡ ಕುಶಾಲಪ್ಪ ಅವರು ತಮ್ಮ ತಂದೆ ಸದಾ ಅಯ್ಯಪ್ಪ ಅವರ ಜ್ಞಾಪಕಾರ್ಥವಾಗಿ ನೀಡಿರುವ ದ್ವಿತೀಯ ಬಹುಮಾನ 15 ಸಾವಿರ ರೂ.ನಗದು, ಟ್ರೋಫಿ, ನೆಲಜಿಯ ಕಾಫಿ ಬೆಳೆಗಾರರಾದ ಚೀಯಕ ಪೂವಂಡ ಕಂಬು ನಂಜಪ್ಪ ಅವರು ಪತ್ನಿ ಮೀನಾಕ್ಷಿ ಅವರ ಜ್ಞಾಪಕಾರ್ಥವಾಗಿ ನೀಡಿರುವ ತೃತೀಯ ಬಹುಮಾನ 10 ಸಾವಿರ ರೂ.ನಗದು, ಟ್ರೋಫಿ ನೀಡಲಾಯಿತು.


3ನೇ ವಿಭಾಗ ಕೋಳಿ ಮೊಟ್ಟೆಗೆ ಗುರಿ ಇಡುವ ಸ್ಪರ್ಧೆ ವಿಜೇತರಿಗೆ ನಾಪೋಕ್ಲು ಕಾಫಿ ಬೆಳೆಗಾರರಾದ ಅರೆಯಡ ಎಂ.ರತ್ನ ಪೆಮ್ಮಯ್ಯ ಅವರು ತಮ್ಮ ತಂದೆ ಎ.ಬಿ.ಮೇದಪ್ಪ ಅವರ ಜ್ಞಾಪಕಾರ್ಥವಾಗಿ ಪ್ರಥಮ ಬಹುಮಾನ 5 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 3 ಸಾವಿರ ರೂ.ನಗದು, ಟ್ರೋಫಿ, ತೃತೀಯ ಬಹುಮಾನ 2 ಸಾವಿರ ರೂ.ನಗದು, ಟ್ರೋಫಿ ನೀಡಿದರು.


ಸಮರೋಪ ಸಮಾರಂಭ: ನಬಾರ್ಡ್ ನಿವೃತ್ತ ಡಿಡಿಎಂ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಯುವಕರಲ್ಲಿ ಆಚಾರ ವಿಚಾರ ಸಂಸ್ಕೃತಿ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸಬೇಕು ಎಂದರು. ಅಸೋಸಿಯೇಷನ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಪಾಂಡಂಡ ಕಿಶನ್ ಪೂಣಚ್ಚ, ಮಂಡೀರ ಜಯ ದೇವಯ್ಯ, ಅರೆಯಡ ಎಂ.ರತ್ನ ಪೆಮ್ಮಯ್ಯ, ಅಂಜಪರವಂಡ ಕುಶಾಲಪ್ಪ , ಚೀಯಕಪೂವಂಡ ಕಂಬು ನಂಜಪ್ಪ, ಅರೆಯಡ ರತ್ನಾ ಪೆಮ್ಮಯ್ಯ, ಚೀಯಕಪೂವಂಡ ಎಂ.ಅಪ್ಪಚ್ಚು, ಕೇಟೋಳಿರ ಹರೀಶ್ ಪೂವಯ್ಯ, ಕರವಂಡ ಬೆಲ್ಲು ಬೆಳ್ಯಪ್ಪ, ಬೊಳ್ಳಜೆಟ್ಟೀರ ಎಂ.ಸುರೇಶ್, ಅರೆಯಡ ಅಶೋಕ್ ಮುದ್ದಪ್ಪ, ಚೇನಂಡ ಸುರೇಶ್ ನಾಣಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಡಕಡ ಸುರೇಶ್ ಬೆಳ್ಳಿಯಪ್ಪ, ಕೇಟೋಳಿರ ಪಿ ವಿನೋದ್, ಕುಂಡಿಯೊಳಂದ ಬೋಪಣ್ಣ, ಕೇಟೋಳಿರ ಶಮ್ಮಿ , ಚೋಕಿರ ಎಸ್.ರೋಷನ್ ಇದ್ದರು. ಮಡಿಕೇರಿಯ ಮುಳಿಯ ಜ್ಯುವೆಲ್ಲರ್ಸ್‌ನಿಂದ ವಿಜೇತರಿಗೆ ಬೆಳ್ಳಿ ನಾಣ್ಯ ನೀಡಲಾಯಿತು.