ಸರಗೂರು: ಕನ್ನಡ ಉಳಿಸಿ, ಬೆಳೆಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸದಾ ಕನ್ನಡಾಭಿಮಾನ ಇಟ್ಟುಕೊಳ್ಳಬೇಕು. ಕನ್ನಡೇತರರಿಗೆ ಕನ್ನಡ ಬಳಸುವಂತೆ ಉತ್ತೇಜನ ನೀಡಬೇಕು ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೈ.ಡಿ.ರಾಜಣ್ಣ ತಿಳಿಸಿದರು.
ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಅನಿಲ್ ಚಿಕ್ಕಮಾದು ಕಾರ್ಯಕ್ರಮ ಉದ್ಘಾಟಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಯ್, ಸದಸ್ಯರಾದ ಎಸ್.ಎಲ್.ರಾಜಣ್ಣ, ಚಲುವಕೃಷ್ಣ, ಶಿವಕುಮಾರ್, ನೂರಾಳಸ್ವಾಮಿ, ಚೈತ್ರಾಸ್ವಾಮಿ, ಹೇಮಾವತಿ ರಮೇಶ್, ಬಿಜೆಪಿ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ, ತಹಸೀಲ್ದಾರ್ ಚಲುವರಾಜು, ಗ್ರೇಡ್2 ತಹಸೀಲ್ದಾರ್ ಪರಶಿವ, ತಾಪಂ ಇಒ ಕೆ.ಸುಷ್ಮಾ, ಮುಖ್ಯಾಧಿಕಾರಿ ಬಿ.ಜೆ.ಸತೀಶ್, ಉಪ ತಹಸೀಲ್ದಾರ್ ಸುನೀಲ್, ಮುಖಂಡರಾದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು. ಗೋಪಾಲಸ್ವಾಮಿ, ಕೆಂಡಗಣ್ಣಸ್ವಾಮಿ, ಶಿವಲಿಂಗ, ಪ್ರಾಂಶುಪಾಲ ಮಲ್ಲೇಶ್, ಆರೋಗ್ಯಾಧಿಕಾರಿ ಡಾ.ಪಾರ್ಥಸಾರಥಿ, ಸಿಪಿಐ ಎನ್.ಆನಂದ್ ಇತರರು ಇದ್ದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಕನ್ನಡ ಶಾಲಾ ಶಿಕ್ಷಕರ ಅಸಮಾಧಾನ: ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಹೊರಗಿಟ್ಟು ಆಂಗ್ಲ ಮಾಧ್ಯಮ ಶಾಲೆಗಳಿಗೆ ಅವಕಾಶ ನೀಡಲಾಗಿದೆ ಎಂದು ಕನ್ನಡ ಮಾಧ್ಯಮ ಶಾಲಾ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮ ಕುರಿತು ಅಧಿಕಾರಿಗಳು ಪ್ರಚಾರವನ್ನೇ ನೀಡಿಲ್ಲ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪಟ್ಟಣದ ಸರ್ಕಾರಿ ಶಾಲೆಗಳಿಗೆ ಮಾಹಿತಿಯನ್ನೂ ನೀಡಿಲ್ಲ ಎಂದು ಆಕ್ರೋಶಗೊಂಡ ಕೆಲ ಶಿಕ್ಷಕರು ಕಾರ್ಯಕ್ರಮದಿಂದ ಹೊರಗುಳಿದರು. ಸ್ಥಳೀಯ ಮುಖಂಡರೂ ಭಾಗಿಯಾಗಿರಲಿಲ್ಲ. ಇದರಿಂದಾಗಿ ಬೆರಳೆಣಿಕೆಯಷ್ಟು ಮಂದಿ ಶಾಲಾ ಮಕ್ಕಳು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.