ಭಾಲ್ಕಿಯ ವಿವಿಧೆಡೆ ಪುರಸಭೆ ಸಿಬ್ಬಂದಿ ಅಂಗಡಿಗಳ ಮೇಲಿನ ಅನ್ಯಭಾಷೆ ನಾಮಫಲಕ ತೆರವುಗೊಳಿಸುತ್ತಿರುವುದು. 
ಜಿಲ್ಲೆ

ಕನ್ನಡೇತರ ನಾಮಫಲಕ ತೆರವು ಕಾರ್ಯಾಚರಣೆ

ರಾಜು ಯಮಕನಮರಡಿ

ಭಾಲ್ಕಿ: ಕರ್ನಾಟಕ ರಾಜ್ಯೋತ್ಸವ ದಿನಗಣನೇ ಇರುವಂತೆ ಪಟ್ಟಣದಲ್ಲಿ ಪುರಸಭೆ ಆಂಗ್ಲ, ಮರಾಠಿ ಸೇರಿ ಕನ್ನಡೇತರ ನಾಮಫಲಕ ಅಳವಡಿಸಿದ ಮಳಿಗೆಗಳ ವಿರುದ್ಧ ಮಂಗಳವಾರ ಕಾರ್ಯಾಚರಣೆ ನಡೆಸಿತು.

ಪಟ್ಟಣದ ವಿವಿಧ ಅಂಗಡಿ ಮುಗ್ಗಟ್ಟು, ವಾಣಿಜ್ಯ ಮಳಿಗೆಗಳ ಮೇಲೆ ಅಳವಡಿಸಿರುವ ಕನ್ನಡೇತರ ನಾಮಫಲಕ ತೆರವುಗೊಳಿಸುವಂತೆ ಕಳೆದ ಕೆಲ ತಿಂಗಳಿನಿಂದ ವಿವಿಧ ಕನ್ನಡಪರ ಸಂಘಟನೆಗಳು ಮನವಿ ಮಾಡುತ್ತಲೇ ಬಂದಿದ್ದವು. ಆದರೆ, ಪುರಸಭೆ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಿಂದ ಹೊರಬಂದಂತೆ ಕಾಣಲಿಲ್ಲ. ಕೊನೆಗೂ ಕನ್ನಡಪರ ಸಂಘಟನೆಗಳ ನಿರಂತರ ಮನವಿ, ಹೋರಾಟಕ್ಕೆ ಎಚ್ಚೆತ್ತು ಪುರಸಭೆ ಅಧಿಕಾರಿಗಳು ರಾಜ್ಯೋತ್ಸವ ಸಮೀಸುತ್ತಿದ್ದಂತೆಯೇ ಅನ್ಯಭಾಷೆಯ ನಾಮಫಲಕ ತೆರವಿಗೆ ಮುಂದಾಗಿದ್ದಾರೆ.

ಪಟ್ಟಣದ ಅಂಬೇಡ್ಕರ್ ವೃತ್ತ ಸೇರಿ ವಿವಿಧೆಡೆ ಮಳಿಗೆಗಳ ಮೇಲೆ ಅಳವಡಿಸಿದ್ದ ನಾಮಫಲಕ ತೆರವಿಗೆ ಮುಂದಾಗಿರುವ ದೃಶ್ಯ ಕಂಡುಬಂತು.

ಪ್ರತಿಸಲ ಕರ್ನಾಟಕ ರಾಜ್ಯೋತ್ಸವ ಸಮೀಪ ಬಂದಾಗಲಷ್ಟೇ ಪುರಸಭೆ ಅಧಿಕಾರಿಗಳು ಕಾಟಚಾರಕ್ಕೆ ಎಂಬಂತೆ ಅನ್ಯಭಾಷೆ ನಾಮಫಲಕ ತೆರವಿಗೆ ಮುಂದಾಗಿ ಮತ್ತೆ ಮರೆತು ಬಿಡುತ್ತಿರುವುದು ಸರಿಯಲ್ಲ.

| ಗಣೇಶ ಪಾಟೀಲ್ ಜಿಲ್ಲಾಧ್ಯಕ್ಷರು ನಮ್ಮ ಕರ್ನಾಟಕ ಸೇನೆ ಬೀದರ್