ಚಿಕ್ಕಮಗಳೂರು: ಕನ್ನಡಿಗರಿಂದಲೇ ಕನ್ನಡ ಭಾಷೆ ನಿರ್ಲಕ್ಷಕ್ಕೆ ಒಳಗಾಗಿದ್ದು ಕನ್ನಡಿಗರು ಇಂಗ್ಲಿಷ್ ವ್ಯಾಮೋಹದ ಮಡಿವಂತಿಕೆ ಬಿಟ್ಟು ಹೊರಬಂದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಖ್ಯಾತವಾಗ್ಮಿ ಮತ್ತು ಲೇಖಕ ಡಾ.ಶ್ರೀಪತಿ ಹಳಗುಂದ ಅಭಿಪ್ರಾಯಪಟ್ಟರು.
ನಗರದ ಲಯನ್ಸ್ ಸಂಸ್ಥೆ, ಸಿವಿಲ್ ಇಂಜಿನಿಯರಿAಗ್ ಸಂಘ ಮತ್ತು ಎಂಇಎಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಎಂಇಎಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಧುಮೇಹ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡಿಗರು ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಪರಿಣಾಮ ಕನ್ನಡ ಮಾತನಾಡಲು ಕನ್ನಡಿಗರಲ್ಲೇ ಕೇಳಿರಿಮೆ ಬಂದಿದೆ. ಪರಭಾಷಿಕರಿಂದ ಕನ್ನಡ ಭಾಷೆಯನ್ನು ಕೊಲ್ಲುವ ಹುನ್ನಾರ ನಡೆದಿದೆ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದ್ದು, ಪೆನ್ನು ಪೇಪರ್ ಇಲ್ಲದ ಕಾಲದಲ್ಲೇ ನಮ್ಮ ಪೂರ್ವಜರು ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿದ್ದಾರೆ. ಅನ್ಯ ಭಾಷೆಗಳ ಹಾವಳಿಯಿಂದ ಕನ್ನಡ ಭಾಷೆಯ ರಕ್ಷಣೆಯೇ ಒಂದು ಸವಾಲಾಗಿ ಪರಿಣಮಿಸಿದೆ. ಕನ್ನಡ ಭಾಷೆ ಎಂಬುದು ಕೇವಲ ಸಂವಾಹನವಲ್ಲ. ಅದೊಂದು ಸಂಸ್ಕೃತಿ. ಎಷ್ಟೇ ಭಾಷೆಗಳಿದ್ದರೂ ಕನ್ನಡ ಯಾವತ್ತಿಗೂ ಸಾಯುವುದಿಲ್ಲ. ಇಂತಹ ಇತಿಹಾಸವುಳ್ಳ ಕನ್ನಡ ಭಾಷೆಯನ್ನು ಬಳಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಇತ್ತೀಚೆಗೆ ಕಂಡುಬರುವ ಮಧುಮೇಹ ಕುರಿತು ಖ್ಯಾತ ಮಕ್ಕಳ ತಜ್ಞ ಹಾಗೂ ಎಂಇಎಸ್ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ರೋಗÀÀಕ್ಕೆ ಬೀದಿ ಬದಿಯ ತಿಂಡಿ ತಿನಿಸುಗಳ ಸೇವನೆ ಮತ್ತು ಮಕ್ಕಳಲ್ಲಿ ಚಟುವಟಿಕೆ ಇಲ್ಲದಿರುವುದೇ ಕಾರಣವಾಗಿದೆ ಎಂದು ಹೇಳಿದರು.
ವಿಶ್ವದಲ್ಲಿರುವ ಏಳು ಸಾವಿರ ಭಾಷೆಗಳಲ್ಲಿ ಕನ್ನಡ ಭಾಷೆ ೪೦ನೇ ಸ್ಥಾನದಲ್ಲಿದೆ. ಅತ್ಯಂತ ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆಯು ಕೂಡ ಒಂದಾಗಿದ್ದು, ಕನ್ನಡ ಪ್ರತ್ಯೇಕ ಲಿಪಿಯನ್ನು ಹೊಂದಿದೆ. ಇದರ ಜೊತೆಗೆ ೮ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ಕನ್ನಡ ಭಾಷೆಗೆ ಹೆಗ್ಗಳಿಕೆಯಾಗಿದೆ ಎಂದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಪುಷ್ಪರಾಜ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಒಂದು ಹಬ್ಬವಾಗಿ ಆಚರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ರಕ್ಷಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಗೋಪಾಲಗೌಡ, ಎಂಇಎಸ್ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯಕುಮಾರ್, ಲಯನ್ಸ್ ವಲಯ ಅಧ್ಯಕ್ಷ ಬಿ.ಎನ್.ವೆಂಕಟೇಶ್, ಕಾರ್ಯದರ್ಶಿ ಗೋಪಿಕೃಷ್ಣ, ಖಜಾಂಚಿ ಎಂ.ಎA.ಗಿರೀಶ್, ಜಿಲ್ಲಾ ಸಿವಿಲ್ ಇಂಜಿನಿಯರಿAಗ್ ಸಂಘದ ಅಧ್ಯಕ್ಷ ಜಿ.ರಮೇಶ್ ಉಪಸ್ಥಿತರಿದ್ದರು.