ಜಿಲ್ಲೆ

ಕನ್ನಡಿಗರಿಂದಲೇ ಕನ್ನಡ ಉಳಿಸುವ ಕೆಲಸವಾಗಲಿ; ಸಮಾರೋಪದಲ್ಲಿ ಅಧ್ಯಕ್ಷೆ ತಾರಾ ಅನುರಾಧ ಅಭಿಮತ

ಆನೇಕಲ್: ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಕನ್ನಡ ಕಟ್ಟಲು ಮುಂದಾಗಬೇಕು ಎಂದು ಆನೇಕಲ್ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ತಾರಾಅನುರಾಧ ಹೇಳಿದರು.

ಅತ್ತಿಬೆಲೆಯ ಜಯಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಆನೇಕಲ್ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಮಾತನಾಡಿದರು.

ಕನ್ನಡ ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಕನ್ನಡಿಗರಿಂದಲೇ ಆರಂಭವಾಗಬೇಕು. ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಲಕ ಇರಬೇಕು. ಈ ಬಗ್ಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು. ಗಡಿಭಾಗದ ಕನ್ನಡ ಸಮಸ್ಯೆ ಬಗ್ಗೆ ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಿ ಕನ್ನಡ ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಬಗ್ಗೆ ಸಮಾಲೋಚನೆಗಳಾಗಬೇಕು ಈ ಮೂಲಕ ಕನ್ನಡ ಗಟ್ಟಿಗೊಳಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ನಾಮಲಕ ಕಡ್ಡಾಯ: ಶಾಸಕ ಬಿ.ಶಿವಣ್ಣ ಮಾತನಾಡಿ, ಸರೋಜಿನಿ ಮಹಿಷಿ ವರದಿ ಶೀಘ್ರ ಜಾರಿಗೊಳಿಸಬೇಕಾಗಿದೆ. ಕನ್ನಡಿಗರಿಗೆ ಉದ್ಯೋಗ ಸಿಗುವಂತಾಗಬೇಕಾಗಿದೆ. ಕನ್ನಡ ಶಾಲೆಗಳ ಕಡೆಗೆ ನಮ್ಮ ನಡಿಗೆ ಎನ್ನುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ತಾರಾ ಕರೆ ನೀಡಿದರು. ಹೊರ ರಾಜ್ಯದಿಂದ ಬಂದವರಿಗೆ ಕನ್ನಡ ಕಲಿಸುವ ಕೆಲಸ ಮಾಡುವುದು, ವಾಣಿಜ್ಯ ಮಳಿಗೆಗಳ ಮೇಲೆ ಕನ್ನಡದ ನಾಮಫಲಕ ಕಡ್ಡಾಯಗೊಳಿಸಬೇಕು ಎಂದರು. 8 ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆಯಿದೆ. ಈ ದೇಶದ ಮುಂದಿನ ಪ್ರಜೆಗಳಾಗಿರುವ ಮಕ್ಕಳಿಗೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಅರಿವು ಮೂಡಿಸಬೇಕಿದೆ ಎಂದರು.

ಕನ್ನಡ ಮನಸ್ಸುಗಳಿಗೆ ಧನ್ಯವಾದ: ಆನೇಕಲ್ ತಾಲೂಕಿನಲ್ಲಿ ನಡೆದ 2 ದಿನದ ಸಮ್ಮೇಳನದಲ್ಲಿ ಸಾವಿರಾರು ಕನ್ನಡ ಮನಸ್ಸುಗಳು ಪಾಲ್ಗೊಂಡಿದ್ದು ಸಂತಸ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 30 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು, ಪ್ರಥಮ ಬಹುಮಾನ 5 ಸಾವಿರ, ಉಳಿದವರಿಗೆ 1 ಸಾವಿರ ರೂ.ನಗದು ಬಹುಮಾನ ಜತೆಗೆ ಪ್ರಮಾಣ ಪತ್ರವನ್ನು ಮುಂದಿನ ಸಮ್ಮೇಳನದಲ್ಲಿ ವಿತರಿಸಲಾಗುವುದು ಎಂದರು.

ಸಮ್ಮೇಳನದ ಎರಡನೇ ದಿನವಾದ ಭಾನುವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಹಿತಿ ವಾಸುದೇವ ನಾಡಿನ ಅವರಿಂದ ಯುವ ಕವಿಗೋಷ್ಠಿ , ಪೊಲೀಸ್ ಮತ್ತು ಜನಸಾಮಾನ್ಯರ ನಡುವೆ ಅರಿವು-ನೆರವು ಕಾರ್ಯಕ್ರಮ, ಆಯುಷ್ಯ ಆರೋಗ್ಯ ಗೋಷ್ಠಿ, ಬಹಿರಂಗ ಅಧಿವೇಶನ ಕಾರ್ಯಕ್ರಮ, ಸಂಜೆ ಸಾಧಕರಿಗೆ ಸನ್ಮಾನ ಮತ್ತಿತರ ವಿಶೇಷ ಕಾರ್ಯಕ್ರಮಗಳು ಜರುಗಿದವು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್‌ಬಾಬು, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಹಿರಿಯ ಹೋರಾಟಗಾರ ಪಟಾಪಟ್ ನಾಗರಾಜ ಮತ್ತಿತರರು ಪಾಲ್ಗೊಂಡಿದ್ದರು.