ಕೆ.ಆರ್.ನಗರ ಪಟ್ಟಣದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರ ಜವಾಬ್ದಾರಿ ಸ್ವೀಕಾರ ಸಮಾರಂಭವನ್ನು ಗಣ್ಯರು ತಾಲೂಕು ಕಸಾಪ ಅಧ್ಯಕ್ಷ ಜಿ.ಡಿಂಡಿಮ ಶಂಕರ್ ರವರಿಗೆ ಕನ್ನಡ ಧ್ವಜ ನೀಡುವ ಮೂಲಕ ಜವಾಬ್ದಾರಿ ವಹಿಸಿದರು. ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆಗೋಪಾಲ್, ನಿಕಟಪೂರ್ವ ಅಧ್ಯಕ್ಷ ವೈ.ಡಿ.ರಾಜಣ್ಣ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭಾ ಅಧ್ಯಕ್ಷ ಪ್ರಕಾಶ್ ಇನ್ನಿತರರು ಇದ್ದರು.  
ಜಿಲ್ಲೆ

ಕನ್ನಡಿಗನಿಗೆ ಸ್ವಾಭಿಮಾನ ಇರಬೇಕು


ಶಾಸಕ ಸಾ.ರಾ.ಮಹೇಶ್ ಅಭಿಮತ


ಕೆ.ಆರ್.ನಗರ: ಕನ್ನಡಿಗನಿಗೆ ಸ್ವಾಭಿಮಾನ ಇರಬೇಕು. ಇಲ್ಲದಿದ್ದರೆ ಅವನು ಕನ್ನಡಿಗನಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರ ಅಧಿಕಾರ ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕೃಷ್ಣಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಭಿಮಾನ ಹೊಂದಿರಬೇಕು. ಪ್ರತಿಯೊಂದು ಇಲಾಖೆಯಲ್ಲೂ ಕನ್ನಡ ಮಾತನಾಡಬೇಕು. ಕನ್ನಡದಲ್ಲಿ ವ್ಯವಹಾರ ಮಾಡಬೇಕೆಂಬ ಆದೇಶವಿದೆ. ಆದರೂ ನೆರೆರಾಜ್ಯದಿಂದ ಬಂದ ಕೆಲ ಅಧಿಕಾರಿಗಳು ಕನ್ನಡ ಮಾತನಾಡಲು ಹಿಂಜರಿಯುತ್ತಿದ್ದಾರೆ. ಇದು ಬೇಸರದ ಸಂಗತಿಯಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಕನ್ನಡ ಪ್ರಾಚೀನ ಭಾಷೆಯಾಗಿದ್ದು, ಇದನ್ನು ಪೋಷಿಸಿ ಬೆಳೆಸುವ ಕೆಲಸ ಮಾಡಬೇಕು. ಕನ್ನಡ ವಿರಾಜಮಾನವಾಗಿ ಬೆಳೆದಿದೆ ಎಂದರೆ ಅದು ಗ್ರಾಮೀಣ ಜನರಿಂದ ಮಾತ್ರ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನಶಿಸುತ್ತಿರುವ ಬೊಂಬೆ ನಾಟಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಕಲಾವಿದರನ್ನು ಕರೆದು ಅಭಿನಂದಿಸುವ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಿಕಟಪೂರ್ವ ಅಧ್ಯಕ್ಷ ವೈ.ಡಿ.ರಾಜಣ್ಣ, ರೇಸ್ ಕ್ಲಬ್ ಅಧ್ಯಕ್ಷ ವೈ.ಡಿ.ಗಣೇಶ್, ತಾಲೂಕು ಕಸಾಪ ಅಧ್ಯಕ್ಷ ಜಿ.ಡಿಂಡಿಮ ಶಂಕರ್, ಸಾಲಿಗ್ರಾಮ ಕಸಾಪ ಅಧ್ಯಕ್ಷ ಮಧುಚಂದ್ರ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪುರಸಭಾ ಅಧ್ಯಕ್ಷ ಪ್ರಕಾಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ಪ್ರಕಾಶ್, ತಾಪಂ ಇಒ ಸತೀಶ್, ಪುರಸಭಾ ಸದಸ್ಯ ಕೆ.ಪಿ.ಪ್ರಭುಶಂಕರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಕಸಾಪ ಪದಾಧಿಕಾರಿಗಳಾದ ಉದಯಕುಮಾರ್, ರಾಮಕೃಷ್ಣ, ಪ್ರಭಾಕರ್ ಹೆಗ್ಗಂದೂರು, ದಾಕ್ಷಾಯಣಿ, ರಾಜಲಕ್ಷ್ಮೀ, ಬೇಬಿಮಹೇಶ್, ಮುಖಂಡರಾದ ಕೃಷ್ಣಶೆಟ್ಟಿ, ಮಹದೇವ್, ಎಚ್.ಪಿ.ಶಿವಣ್ಣ, ಗರುಡಗಂಬದಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.