ಮೈಸೂರು: ಕನ್ನಡಾಭಿಮಾನವನ್ನು ಸದಾ ಜಾಗೃತಗೊಳಿಸಿ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಎಂ.ಮಲ್ಲಿಕಾರ್ಜುನಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಹಂಚ್ಯಾ-ಸಾತಗಳ್ಳಿ ಬಿ. ವಲಯದಲ್ಲಿ ಭಾನುವಾರ ಆಯೋಜಿಸಿದ್ದ ಹಂಸವಾಣಿ ಹಿರಿಯ ನಾಗರೀಕರ ಹಿತರಕ್ಷಣಾ ಸಮಿತಿ ಹಾಗೂ ಹಂಸವಾಣಿ ಕನ್ನಡ ಬಳಗದ ಉದ್ಘಾಟನೆ ಹಾಗೂ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ನೆಲ, ಜಲ, ಭಾಷೆಯ ರಕ್ಷಣೆಯಲ್ಲಿ ನಾವು ಯಾವುದೇ ಕಾರಣಕ್ಕೂ ಮೈ ಮರೆಯಬಾರದು. ಅನ್ಯ ಭಾಷಿಕರು ಎಲ್ಲವನ್ನೂ ಆಕ್ರಮಿಸಿಕೊಳ್ಳುವ ಅಪಾಯವೇ ಹೆಚ್ಚು. ಎಲ್ಲರಲ್ಲೂ ಕನ್ನಡಾಭಿಮಾನ ಇದ್ದರೂ ಅಭಿವ್ಯಕ್ತಗೊಳಿಸುವುದು ಕಡಿಮೆ ಅಗಿದೆ. ಆದ್ದರಿಂದ ನಾವು ಹುಟ್ಟಿದಾಗ ನಾಡು ಹೇಗಿತ್ತೋ ಅದನ್ನು ಗಮನಿಸಿ ನಾವು ಸಾಯುವ ಮುನ್ನ ಅದನ್ನು ಮತ್ತಷ್ಟು ಸುಂದರಗೊಳಿಸೋಣ ಎನ್ನುವ ಸಾಹಿತಿಗಳ ಆಶಯವನ್ನು ಪೂರ್ಣಗೊಳಿಸೋಣ ಎಂದರು.
ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕನ್ನಡ ಭಾಷೆಯ ಬಳಕೆ, ರಕ್ಷಣೆ ಮತ್ತು ಅದನ್ನು ಕನ್ನಡ ಬಾರದಿರುವ ಜನರಿಗೆ ಕಲಿಸುವ ವಿಧಾನ ಕುರಿತು ತಿಳವಳಿಕೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಮಹಾಕಾವ್ಯಗಳು ಬಂದಂತಹ ಕಾಲದಲ್ಲಿ ಇಂಗ್ಲೀಷ್ ಭಾಷೆ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ಆದರೆ ಇಂಗ್ಲಿಷ್ ಭಾಷಿಕರ ಭಾಷಾಭಿಮಾನದಿಂದ ಇಂದು ಆ ಭಾಷೆ ಜಗತ್ತನ್ನೇ ಆಳುತ್ತಿದೆ. ಕನ್ನಡಿಗರು ಇಂತಹ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಾದೇಗೌಡ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಹಂಚ್ಯಾ ಸಾತಗಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಟಿಆರ್ ಮಂಜು, ಹಂಸವಾಣಿ ಹಿರಿಯ ನಾಗರೀಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ವಿ.ಕಾಂತರಾಜು, ಉಪಾಧ್ಯಕ್ಷ ಎಲ್.ಕೃಷ್ಣರಂಗರಾಜು, ಪ್ರಧಾನ ಕಾರ್ಯದರ್ಶಿ ಟಿ.ನಟರಾಜು, ಖಜಾಂಚಿ ನಾಗಸುಂದರ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಹಂಸವಾಣಿ ಕನ್ನಡ ಬಳಗದ ಅಧ್ಯಕ್ಷ ಕೆ.ಸಿ.ಪ್ರಶಾಂತ್, ಉಪಾಧ್ಯಕ್ಷ ಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರಾಘವೇಂದ್ರ ಭಟ್, ಖಜಾಂಚಿ ಎಂ.ಪ್ರವೀಣ್ ಲಾಡ್ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಸಹ ಕಾರ್ಯದರ್ಶಿ ಅರುಣ್ ಕುಮಾರ್ ಇತರರು ಇದ್ದರು. ಕಾರ್ಯಕ್ರಮದಲ್ಲಿ ಬಡಾವಣೆಯ ಯುವಕರು, ಮಕ್ಕಳಿಗಾಗಿ ಏರ್ಪಡಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ, ಎಲ್ಲ ಸ್ಪರ್ಥಿಗಳಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಲಾಯಿತು.