Oplus_131072 
ಜಿಲ್ಲೆ

ಕನ್ನಡಾಭಿಮಾನ ಒಂದು ದಿನಕ್ಕೆ ಸೀಮಿತವಾಗದಿರಲಿ

ವಿರಾಜಪೇಟೆ: ಕನ್ನಡ ನಾಡು, ನುಡಿ ಉಳಿಸಿ, ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದ್ದು, ಕನ್ನಡದ ಮೇಲಿನ ಅಭಿಮಾನ ಒಂದು ದಿನಕ್ಕೆ ಮಾತ್ರ ಸೀಮಿತವಾದುದ್ದಲ್ಲ, ಕನ್ನಡ ನಮ್ಮ ಉಸಿರಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಬಸವರಾಜು ಸಲಹೆ ನೀಡಿದರು.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಎನ್‌ಎಸ್‌ಎಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸುಂದರ ಭಾಷೆಯಾಗಿದ್ದು, ಜಗತ್ತಿನಲ್ಲಿ ಮಾತನಾಡಿದಂತೆ ಬರೆಯುವ, ಬರೆದಂತೆ ಓದುವ, ಓದಿದಂತೆ ಮಾತನಾಡುವ ಭಾಷೆ ಎಂದರೆ ಕನ್ನಡ ಮಾತ್ರ ಎಂದರು.

ಇತರ ಪ್ರಾದೇಶಿಕ ಭಾಷೆಗಳು ಹಾಗೂ ಹೊರ ರಾಜ್ಯದ ಭಾಷೆಗಳಿಂದಾಗಿ ಕನ್ನಡ ತುಳಿತಕ್ಕೆ ಒಳಗಾಗುತ್ತಿದೆ. ಇದು ಸರಿಯಲ್ಲ. ಎಂಟು ಜ್ಞಾನಪೀಠ ಪ್ರಶಸ್ತಿ , ಒಂದು ಸರಸ್ವತಿ ಸಮ್ಮಾನ್, ಮೂವರು ರಾಷ್ಟ್ರ ಕವಿಗಳನ್ನು ಹೊಂದಿದ ಶ್ರೀಮಂತ ಭಾಷೆ ನಮ್ಮದೆಂಬ ಹೆಗ್ಗಳಿಕೆ ನಮ್ಮಲ್ಲಿರಬೇಕು. ಕನ್ನಡಿಗನ ಕಿಚ್ಚು ಸ್ವಾಭಿಮಾನಕ್ಕೆ ಇತಿಹಾಸವನ್ನು ನೋಡಿದಾಗ ಚಾಲುಕ್ಯರ ಸೇನೆ, ಇಮ್ಮಡಿ ಪುಲಕೇಶಿಯಂತಹ ಶ್ರೇಷ್ಠ ಅರಸರು ಇದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಎಂದರು.

ರಾಷ್ಟ್ರೀಯ ಸೇವಾ ಯೋಜನೆ ಸೇವಾ ಮನೋಭಾವ ಹಾಗೂ ಭವಿಷ್ಯದ ಉತ್ತಮ ಸಮಾಜದ ನಿರ್ಮಾಣದ ಪರಿಕಲ್ಪನೆಯನ್ನು ನಮ್ಮಲ್ಲಿ ತುಂಬುತ್ತದೆ. ಧನಾತ್ಮಕ ಜೀವನ ಶೈಲಿಯೊಂದಿಗೆ ಭವಿಷ್ಯದೊಳಗೆ ಹೇಗೆ ಸಾಗಬೇಕು ಎಂಬುದನ್ನು ತಿಳಿಸುತ್ತಾ ಕಮಿಟ್‌ಮೆಂಟ್, ಕರೇಜ್, ಕಾಂಟ್ರಿಬ್ಯೂಷನ್ ಬೆಳೆಸುವಂತಹ ಶಕ್ತಿ ಎನ್ನೆಸ್ಸ್ಸೆಸ್ ನೀಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಬೆನೆಡಿಕ್ಟ್ ಆರ್.ಸಲ್ಡಾನ್ಹಾ ಮಾತನಾಡಿ, ನಾವೆಲ್ಲ ಕನ್ನಡಿಗರು ಎಂಬ ಹೆಮ್ಮೆ ನಮ್ಮಲ್ಲಿ ಇರಬೇಕು. ನಾವಾಡುವ ಭಾಷೆ ಜಗತ್ತಿನ ಶ್ರೇಷ್ಠ ಭಾಷೆ. ಜಗತ್ತಿನ ಎಲ್ಲಿಯೂ ಕಾಣಿಸಿದಂತಹ ಚಂಪು, ವಚನ, ಕೀರ್ತನೆ, ರಗಳೆಯಂತಹ ಸಾಹಿತ್ಯ ಪ್ರಕಾರಗಳನ್ನು ಒಳಗೊಂಡ ಭಾಷೆ. ಆದರೆ ಇಂದು ರಕ್ಷಣ ವೇದಿಕೆಗಳ ಮೂಲಕ ಭಾಷೆಯನ್ನು ಉಳಿಸುವಂತಹ ಕಾರ್ಯ ನಡೆಯುತ್ತಿದೆ. ಇದು ನಿಜವಾಗಿ ಕನ್ನಡಿಗರು ತಲೆ ತಗ್ಗಿಸುವ ವಿಚಾರ. ಕನ್ನಡವನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆಯುತ್ತಾರೆ. ಕನ್ನಡ ಅಕ್ಷರಗಳ ಸೌಂದರ್ಯ ರಚನೆಯಾದ ರೀತಿ ನಿಜಕ್ಕೂ ಅದ್ಭುತವಾದದ್ದು. ಕನ್ನಡ ಹಲವು ಶತಮಾನಗಳಿಂದ ಸಮೃದ್ಧವಾಗಿ ಬೆಳೆದು ಬಂದಿದೆ. ಸದಾ ಕನ್ನಡವನ್ನು ಬಳಸಿ, ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಒಗ್ಗೂಡಿ ಮಾಡೋಣ ಎಂದರು.

ನಂತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಉಪ ಪ್ರಾಂಶುಪಾಲೆ ಡಾ.ವೀಣಾ, ಐಕ್ಯೂಎಸಿ ಸಂಚಾಲಕಿ ಪ್ರಿಯಾ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿ ಸಂಚಾಲಕ ನಾಗರಾಜು, ಕನ್ನಡ ವಿಭಾಗದ ಮುಖ್ಯಸ್ಥ ಸುನಿಲ್ ಕುಮಾರ್ ಉಪಸ್ಥಿತರಿದ್ದರು

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿ ಸಿಬ್ಬಂದಿ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.