ಜಿಲ್ಲೆ

ಕನ್ನಡಾಂಬೆ ರೂಪದಲ್ಲಿ ಬರಗೇರಮ್ಮ

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿ ಇರುವ ನಗರದೇವತೆ ಬರಗೇರಮ್ಮ ದೇಗುಲದಲ್ಲಿ 50ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ದೇವಿ ಮೂರ್ತಿಯನ್ನು ಅತ್ಯಾಕರ್ಷಕವಾಗಿ ಕನ್ನಡಾಂಬೆ ರೂಪದಲ್ಲಿ ಅಲಂಕರಿಸಲಾಗಿತ್ತು.

ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹಳದಿ, ಕೆಂಪು ವರ್ಣದ ಪುಷ್ಪಗಳಿಂದ ಭೂಪಟದ ಮಾದರಿ ನಿರ್ಮಿಸಿ ಅದರೊಳಗೆ ಬರಗೇರಮ್ಮ ದೇವಿಯೇ ತಾಯಿ ಭುವನೇಶ್ವರಿಯಾಗಿ ಕಂಗೊಳಿಸುವಂತೆ ಅರ್ಚಕರು ಸಿಂಗರಿಸಿದ್ದರು. ಈ ವಿಶೇಷಾಲಂಕಾರ ಕಣ್ತುಂಬಿಕೊಳ್ಳಲು ನಗರದ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರು.

ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ ಸೇರಿ ರಾಷ್ಟ್ರೀಯ, ನಾಡ ಹಬ್ಬಗಳಲ್ಲಿ ವಿಶೇಷ ಪೂಜೆ ಸಮೇತ ದೇವಿ ಮೂರ್ತಿಗೆ ಹೊಸ ರೂಪ ನೀಡುವಲ್ಲಿ ಸಫಲತೆ ಕಂಡಿರುವ ಈ ದೇಗುಲಕ್ಕೆ ದಿನೇ ದಿನೆ ಭಕ್ತರ ಸಂಖ್ಯೆಯೂ ದ್ವಿಗುಣವಾಗುತ್ತಿದೆ.

ಜಿಲ್ಲೆಯಷ್ಟೇ ಅಲ್ಲದೆ, ನಾಡಿನ ವಿವಿಧೆಡೆಯ ಭಕ್ತರು ಸನ್ನಿಧಿಗೆ ಬಂದು ಇಷ್ಟಾರ್ಥ ಈಡೇರಿಕೆಗೆ ವಿಶೇಷವಾಗಿ ಪ್ರತಿ ಮಂಗಳವಾರ, ಶುಕ್ರವಾರದಂದು ಪ್ರಾರ್ಥಿಸುವ ಪರಿಪಾಠವೂ ಮುಂದುವರೆದಿದೆ. ಈ ಮೂಲಕ ದೇಗುಲ ಗಮನ ಸೆಳೆಯುತ್ತಿದೆ.