ಮೈಸೂರು: ಪೂರ್ಣಚಂದ್ರ ತೇಜಸ್ವಿ ಅವರಿಗೆ ಇಂಗ್ಲಿಷ್ ಭಾಷೆಯಲ್ಲಿ ಆಳ ಜ್ಞಾನವಿದ್ದರೂ ಕನ್ನಡ ಭಾಷೆಯನ್ನೇ ತಮ್ಮ ಉಸಿರಾಗಿಸಿಕೊಂಡು ಉತ್ಕೃಷ್ಟ ಸಾಹಿತ್ಯವನ್ನು ನಮ್ಮ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದು ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ ಅಭಿಪ್ರಾಯಪಟ್ಟರು.
ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಮತ್ತು ಕನ್ನಡ ವಿಭಾಗದಿಂದ ಬುಧವಾರ ಆಯೋಜಿಸಿದ್ದ ಪೂರ್ಣಚಂದ್ರ ತೇಜಸ್ವಿ ನೆನಪು ಸಮಾರಂಭದಲ್ಲಿ ಅವರು ಮಾತನಾಡಿದರು.
ತೇಜಸ್ವಿ ಅವರು ಒಬ್ಬ ಕಲಾ ವಿದ್ಯಾರ್ಥಿಯಾಗಿದ್ದರೂ ವಿಜ್ಞಾನದ ಬಗ್ಗೆಯೂ ಅಪಾರ ಆಸಕ್ತಿ ಇತ್ತು. ಆದ್ದರಿಂದಲೇ ಅವರು ಕನ್ನಡಕ್ಕೂ ಮೀರಿದ ಭೌತ ಮತ್ತು ರಾಸಾಯನ ಶಾಸ್ತ್ರದ ಬಗ್ಗೆ ಜ್ಞಾನ ಹೊಂದಿದ್ದರು. ಕುವೆಂಪು ಕುರಿತು ತಮ್ಮ ಆತ್ಮಕಥೆಯಾದ ಅಣ್ಣನ ನೆನಪು ಕೃತಿಯಲ್ಲಿ ತೇಜಸ್ವಿಯವರು ಇಂತಹ ಪ್ರತಿಯೊಂದು ಸ್ವಾರಸ್ಯಕರ ಸಂಗತಿಗಳನ್ನು ತೆರೆದಿಟ್ಟಿದ್ದಾರೆ ಎಂದು ಹೇಳಿದರು.
ಒಬ್ಬ ಶ್ರೇಷ್ಠ ಬರಹಗಾರರಾಗಿ, ಪರಿಸರ ಪ್ರೇಮಿಯಾಗಿ, ಕೃಷಿಕರಾಗಿ, ಸಾಮಾಜಿಕ ಹೋರಾಟಗಾರರಾಗಿ, ಕಂಪ್ಯೂಟರ್ ತಂತ್ರಜ್ಞ, ಅದ್ಭುತ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಬಹಮುಖ ಪ್ರತಿಭೆ. ಇಂದು ನಡೆಯುತ್ತಿರುವ ಪ್ರಾಣಿ ಮತ್ತು ಮಾನವ ಸಂಘರ್ಷವನ್ನು ತೇಜಸ್ವಿ ತಮ್ಮ ಕಾಡು ಮತ್ತು ಕ್ರೌರ್ಯ, ಕರ್ವಾಲೋ ಪುಸ್ತಕಗಳಲ್ಲಿ ತಮ್ಮದೇ ಧಾಟಿಯಲ್ಲಿ ವರ್ಣಿಸಿ ಅರಣ್ಯ ರಕ್ಷಣೆಯ ಮಹತ್ವಗಳನ್ನು ವಿವರಿಸಿದ್ದಾರೆ ಎಂದರು.
ದಿನೇ ದಿನೆ ಅರಣ್ಯ ನಾಶವಾಗುತ್ತಿರುವುದರಿಂದಲೇ ಪ್ರಾಣಿಗಳು ನಗರದತ್ತ ಪ್ರಯಾಣ ಮಾಡುತ್ತಿವೆ ಎಂಬುದನ್ನು ತಮ್ಮ ಪರಿಸರ ಕುರಿತ ಬರವಣಿಗೆಯಲ್ಲಿ ವಿವರಿಸಿದ್ದಾರೆ. ಕನ್ನಡಕ್ಕೆ ವಿಶ್ವ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕೊಡುಗೆ ಅಪಾರ. ಇಂದು ಅವರು ಬದುಕಿದ್ದರೆ ಕನ್ನಡಕ್ಕೆ ಬೇಕಾದ ಮತ್ತಷ್ಟು ತಂತ್ರಜ್ಞಾನ ಶೋಧನೆ ಮಾಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಸಸ್ಯಹಾರಕ್ಕಿಂತಲೂ ಮಾಂಸಾಹಾರ ತೇಜಸ್ವಿಯರಿಗೆ ಹೆಚ್ಚು ಇಷ್ಟವಾದ ಆಹಾರವಾಗಿತ್ತು. ಸ್ವತಃ ಅವರೇ ವಿಶೇಷ ಅಡುಗೆ ಮಾಡುತ್ತಿದ್ದರು. ಮೀನಿನ ಆಹಾರ ಅವರಿಗೆ ಹೆಚ್ಚು ಪ್ರಿಯವಾದ ಮಾಂಸಾಹಾರವಾಗಿತ್ತು. ತೇಜಸ್ವಿ ಅವರು ಆಡಂಬರ ಇಲ್ಲದ ಪ್ರೇಮ ವಿವಾಹವಾಗಿದ್ದರು. ಕುವೆಂಪು ಅವರು ತಮ್ಮ ಮಂತ್ರಮಾಂಗಲ್ಯವನ್ನು ಮೊದಲ ಬಾರಿಗೆ ಅವರ ಪುತ್ರ ತೇಜಸ್ವಿ ಮದುವೆ ಮೂಲಕ ಪ್ರಯೋಗಿಸಿದರು ಎಂದರು.
ಕಾಲೇಜಿನ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಟಿ.ಎ.ಚಂದನಾ ಅವರು ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಸಾಧನೆ ಕುರಿತು ಪ್ರಬಂಧ ಮಂಡಿಸಿದರು. ಕಾಲೇಜಿನ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಭಾರ ಪ್ರಾಂಶುಪಾಲ ಡಾ.ಎನ್.ಐ.ಲೋಕೇಶ್, ಪ್ರಾಧ್ಯಾಪಕರಾದ ಬಸಪ್ಪ, ಗುರು ಶಾಂತಮ್ಮ, ಗ್ರಂಥಪಾಲಕಿ ಬಿ.ಆರ್.ಶುಭಾ ಅರಸ್ ಇದ್ದರು.