ಕಲಬುರಗಿ: ಆತ್ಮಕಥೆಗಳು ಮರಾಠಿ ಸಾಹಿತ್ಯದಲ್ಲಿ ಹೆಚ್ಚಾಗಿ ಪ್ರಕಟವಾಗಿದ್ದು, ಕನ್ನಡದಲ್ಲೂ ಹೆಚ್ಚೆಚ್ಚು ಪ್ರಕಟವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಪ್ರಕಾಶನ ಸಹಯೋಗದಡಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕಥೆಗಾರ ಪ್ರೊ.ಕೃಷ್ಣ ಎಸ್.ನಾಯಕ ಅವರ ಆತ್ಮಕಥನ ವಲಸೆ ಹಕ್ಕಿಯ ಹಾಡು ಕೃತಿ ಬಿಡುಗಡೆಗೊಳಿಸಿದ ಅವರು, ಜೀವನ ಪ್ರೀತಿ ಘಟ್ಟ, ಕಣ್ಮುಂದೆ ಕಟ್ಟಿಕೊಂಡ ಸಂಗತಿಗಳನ್ನು ಬಿಚ್ಚಿಟ್ಟ ಬರಹಗಳು ಆತ್ಮಕಥೆಗಳಾಗಬೇಕು. ನಾವು ಎದುರಿಸಿದ ಮತ್ತು ಅನುಭವಿಸಿದ ನೋವು-ನಲಿವುಗಳು ಸಂಕಥನಗಳಾಗಬೇಕು ಎಂದರು.
ಕುವೆಂಪು, ಶಿವರಾಮ ಕಾರಂತ, ಸಿದ್ಧಲಿಂಗಯ್ಯ ಅವರಂಥ ಸಾಹಿತಿಗಳ ಆತ್ಮಕಥೆಗಳು ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿವೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಆತ್ಮಕಥೆಗಳು ಬಂದರೆ ಒಬ್ಬ ವ್ಯಕ್ತಿಯ ಸಾಮಾಜಿಕ ಮತ್ತು ಜೀವನ ಮೌಲ್ಯ ಅರ್ಥವಾಗುತ್ತದೆ ಎಂದು ಹೇಳಿದರು.
ಕೃತಿ ಪರಿಚಯಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ವಿಕ್ರಮ್ ವಿಸಾಜಿ ಮಾತನಾಡಿ, ವಲಸೆ ಹಕ್ಕಿಯ ಹಾಡು ಎಂಬ ಆತ್ಮಕಥನ ಜೀವನದ ಸತ್ಯ ಸಂಗತಿ ಅವಲೋಕಿಸುವುದಾಗಿದೆ. ನಿರೂಪಿಸುವ ಬರಹಗಳ ಕ್ರಮ ಸಾರ್ಥಕವಾಗಬೇಕು. ಮನಸ್ಸಿನ ಭಾವಗಳು ಬದುಕಿನ ಮೌಲ್ಯಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಶರಣಬಸವೇಶ್ವರ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತಿç ಹೆರೂರ್, ಹಿರಿಯ ಲೇಖಕಿ ಪ್ರಮೀಳಾ ಜಾನಪ್ಪಗೌಡ, ಸಾಹಿತಿ ಸಿ.ಎಸ್. ಆನಂದ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ವಿಶ್ವ ಪ್ರಕಾಶನದ ಉಷಾ ನಾಯಕ್, ಸಿ.ಎಸ್. ಮಾಲಿಪಾಟೀಲ್, ಜ್ಯೋತಿ ಕೋಟನೂರ, ಶಿಲ್ಪಾ ಜೋಶಿ, ವೀರೇಂದ್ರಕುಮಾರ ಕೊಲ್ಲೂರ, ಎಸ್.ಕೆ. ಬಿರಾದಾರ್, ಆನಂದ ನಾಯಕ್, ಗೀತಾರಾಣಿ ನಾಯಕ್, ವಿನೋದಕುಮಾರ ಜನೇವರಿ, ಅಪ್ಪಾರಾವ ಅಕ್ಕೋಣಿ, ಡಾ.ಎಚ್.ಟಿ. ಪೋತೆ, ಸೂರ್ಯಕಾಂತ ಸೊನ್ನದ್, ಶಿವಲಿಂಗಪ್ಪ ಅಷ್ಟಗಿ, ಸಿದ್ಧರಾಮ ಹೊನ್ಕಲ್, ಸೂರ್ಯಕಾಂತ ಸುಜ್ಯಾತ್, ಡಾ.ಮಲ್ಲಿನಾಥ ತಳವಾರ, ಸಿದ್ಧಲಿಂಗ ಬಾಳಿ, ವಿ.ಎಂ. ಪತ್ತಾರ, ಡಾ.ವೆಂಕಟರೆಡ್ಡಿ ರುದ್ರವಾರ, ಶಂಕರ ಚವ್ಹಾಣ್, ಬಾಬು ಜಾಧವ್, ಡಾ.ಜಯದೇವಿ ಗಾಯಕವಾಡ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ ಭಾಗವಹಿಸಿದ್ದರು.