ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನದ ಎದುರು ಬುಧವಾರ ಕರವೇ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು 
ಜಿಲ್ಲೆ

ಕನ್ನಡದಲ್ಲಿ ನೇಮಕ ಪ್ರಕ್ರಿಯೆ ನೆಡೆಸಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಕೇಂದ್ರ ಸರ್ಕಾರಿ ಸಿಬ್ಬಂದಿ ನೇಮಕಾತಿ ಆಯೋಗದಿಂದ ಆಗುತ್ತಿರುವ ಬಿ ಮತ್ತು ಸಿ ದರ್ಜೆ ನೌಕರಿಗಳಲ್ಲಿ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಆಗ್ರಹಿಸಿ ಕರವೇ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ ೨೦,೦೦೦ ಕ್ಕೂ ಹೆಚ್ಚಿನ ' ಬಿ ' ಮತ್ತು ' ಸಿ ' ದರ್ಜೆಯ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಿಕೆಯಿಂದ ಹಿಡಿದು ಎಲ್ಲ ಹಂತಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತನಕ ಕೇವಲ ಹಿಂದಿ ಮತ್ತು ಇಂಗ್ಲೀಷ ಭಾಷೆಗಳಲ್ಲಿ ನಡೆಯಲಿವೆ. ಇದರಿಂದ ಕನ್ನಡಿಗರರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗಲಿದೆ. ನೇಮಕಾತಿಯ ಎಲ್ಲ ಹಂತದ ಪರೀಕ್ಷೆಗಳೂ ಹಿಂದಿ, ಇಂಗ್ಲೀಷ ಭಾಷೆಗಳಲ್ಲಿ ಮಾತ್ರ ನಡೆಸಲಾಗುತ್ತದೆ. ಹಿಂದಿ ಭಾಷಿಕರಿಗೆ ಮಾತ್ರ ಅನುಕೂಲವಾಗಲಿದೆ. ಇತರರಿಗೆ ಭಾಷಾ ಸಮಸ್ಯೆ ಉಂಟಾಗಲಿದೆ ಎಂದು ದೂರಿದರು.
ಇಡೀ ನೇಮಕಾತಿ ಪ್ರಕ್ರಿಯೆಯು ವಲಯವಾರು ನಡೆಸಬೇಕು. ಕನ್ನಡದಲ್ಲಿ ಪರೀಕ್ಷೆ, ಇತರ ಪ್ರಕ್ರಿಯೆ ನಡೆಸಬೇಕು. ಇದರಿಂದ ಕನ್ನಡಿಗರು ಅರ್ಜಿ ಸಲ್ಲಿಸಲು ಮತ್ತು ನೇಮಕವಾಗಲು ಸಹಕಾರಿಯಾಗುತ್ತದೆ ಎಂದು ಆಗ್ರಹಿಸಿದರು.
ಮುಖಂಡರಾದ ಬಸವರಾಜ ಧರ್ಮಂತಿ, ಭಾಗ್ಯಾ ಬೆಟಗೇರಿ, ಬಸವರಾಜ ಅಂಬಿಗೇರ, ಆತ್ಮಾರಾಮ ನೀಲನಾಯಕ ಇತರರು ಇದ್ದರು.