ವಿರಾಜಪೇಟೆ: ಜೀವನ ನಿರ್ವಹಣೆಗಾಗಿ ಇಂಗ್ಲಿಷ್ ಕಲಿಯುವುದರೊಂದಿಗೆ ಬದುಕಿನ ಸಾಂಸ್ಕೃತಿಕ ಸಮೃದ್ಧತೆಗಾಗಿ ಕನ್ನಡ ಕಲಿಯುವ ಮೂಲಕ ಸಾಂಸ್ಕೃತಿಕ ಅಸ್ಮಿತೆ ಉಳಿಸಿಕೊಳ್ಳಬೇಕಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ಆರ್ಜಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿರಾಜಪೇಟೆ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಗೆ ತನ್ನದೆ ಆದ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಜೀವಂತಿಕೆ ಕಾಪಾಡಿಕೊಂಡು ಬಂದಿರುವ ಹೆಮ್ಮೆ ಕನ್ನಡ ಭಾಷೆಗಿದೆ. ಕನ್ನಡ ಭಾಷೆಯಾಗಿ ಉಳಿಯದೆ ಒಂದು ಸಂಸ್ಕೃತಿಯಾಗಿದೆ. ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ನಾನಾ ಕಲೆಗಳ ಅಭಿವೃದ್ಧಿಗೆ ಕನ್ನಡ ಭಾಷೆಯ ಪಾತ್ರ ಮಹತ್ವವಾದದು ಎಂದು ಸ್ಮರಿಸಿದರು.
ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕೀರ್ತಿ ಕನ್ನಡಕ್ಕಿದೆ. ಎಲ್ಲ ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಯ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳಿಗೆ ದೊರೆತ ಗೌರವ ಎಂಬುದು ಮುಖ್ಯ ಅಂಶ. ಸಮ್ಮೇಳನದಲ್ಲಿ ನಿರ್ಣಯಗಳನ್ನು ಮಂಡಿಸುವಾಗ ಇಲ್ಲಿನ ಪ್ರಾದೇಶಿಕ ಸಮಸ್ಯೆಗಳಿಗೆ ಒತ್ತು ಕೊಡಬೇಕು. ಜನಪ್ರತಿನಿಧಿಯಾಗಿ ನಾಡು-ನುಡಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರೂ ಪೂರಕ ಸ್ಪಂದನೆ ನೀಡಲಾಗುವುದು ಎಂದರು.
ಅನೇಕತೆಯಲ್ಲಿ ಏಕತೆ ಇರುವುದರಿಂದಲೇ ಆಚಾರ, ವಿಚಾರ, ಪದ್ಧತಿ, ಪರಂಪರೆಗಳು ಉಳಿದುಕೊಂಡಿದೆ. ಜಿಲ್ಲೆಯಲ್ಲಿ ಖ್ಯಾತ ಸಾಹಿತಿಗಳು, ವೀರ ಸೇನಾನಿಗಳಿದ್ದಾರೆ. ಇಲ್ಲಿನ ನದಿಗಳು ಕರ್ನಾಟಕವನ್ನು ರಕ್ಷಣೆ ಮಾಡುತ್ತಿವೆ. ಹಾಗಾಗಿ ಸಂಸ್ಕೃತಿಗೆ ಧಕ್ಕೆ ಆಗದ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.
ಮೈಸೂರಿನ ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಂ.ಪಿ.ರೇಖಾ ವಸಂತ್ ಮಾತನಾಡಿ, ಕೊಡಗಿನ ಶ್ರೇಷ್ಠತೆಯ ಬಗ್ಗೆ ಬಹಳಷ್ಟು ಕವಿಗಳು ಈಗಾಗಲೇ ಬರೆದಿದ್ದಾರೆ. ಕೊಡಗಿನಲ್ಲಿ ಬಂದೂಕನ್ನು ಹಿಡಿಯುವ ಕೈ ಲೇಖನಿಯನ್ನೂ ಹಿಡಿದಿವೆ ಎಂದರು.
ಮನುಷ್ಯ ಹೆಚ್ಚು ಸಾಕ್ಷರತರಾಗುತ್ತ ಆತಲ್ಲ್ಲಿರುವ ರಾಕ್ಷಸಿತನ ಹೊರಬರುತ್ತಿವೆ. ನಾಡು ನುಡಿಗಾಗಿ ನಡೆಯುವ ನುಡಿ ಹಬ್ಬಗಳಲ್ಲಿ ಜಾತಿ, ಮತ, ಧರ್ಮಗಳು ಒಳನುಸುಳುತ್ತಿವೆ. ಇದು ಆಘಾತಕಾರಿ ವಿಚಾರ. ಮತ್ತೊಂದು ಧರ್ಮ, ಭಾಷೆಯನ್ನು ಗೌರವಿಸಿದರೆ ಆ ಭಾಷೆಯ ಶ್ರೀಮಂತಿಕೆ ಹೆಚ್ಚಾಗುತ್ತದೆ ಎಂದರು.
ಡಾ.ಎಸ್.ವಿ.ನರಸಿಂಹನ್ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವತ್ಸಲಾ ಶ್ರೀಶಾ ಬರೆದ ತಪಸ್ಯ ಗಜಲ್ ಪುಸ್ತಕವನ್ನು ಶಾಸಕ ಕೆ.ಜಿ.ಬೋಪಯ್ಯ ಬಿಡುಗಡೆ ಗೊಳಿಸಿದರು. ಕ.ಸಾ.ಪ. ಮಾಜಿ ಅಧಕ್ಷ ಟಿ.ಪಿ. ರಮೇಶ್ ಸ್ಮರಣ ಸಂಚಿಕೆ ಮುಖಪುಟ ಬಿಡುಗಡೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಮಾದಂಡ ಎಸ್ ಪೂವಯ್ಯ, ತಾಲೂಕು ಅಧ್ಯಕ್ಷ ಡಿ.ಪಿ.ರಾಜೇಶ್, ಬೇಟೋಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮುನಾ, ಆರ್ಜಿ ಸಂತ ಅಂಥೋಣಿ ದೇವಾಲಯದ ಧರ್ಮಗುರು ರೋನಿ ರವಿಕುಮಾರ್, ಗುಂಡಿಗೇರೆ ಮಸೀದಿಯ ಮೌಲನಾ ಸಿ.ಪಿ. ಅಹಮದ್ ಮದನಿ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಸಮ್ಮಳನಾಧ್ಯಕ್ಷರನ್ನು ಬೇಟೋಳಿ ಗ್ರಾಮ ಪಂಚಾಯಿತಿಯಿಂದ ಮುರಾರ್ಜಿ ವಸತಿ ಶಾಲೆಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಂಗಳವಾದ್ಯ, ಚಂಡೆ, ಕಳಸಗಳು, ಕಂಸಾಳೆ, ಡೊಳ್ಳುಕುಣಿತ, ವೀರಗಾಸೆ, ಪೂಜಾ ಕುಣಿತ, ನಂದಿಧ್ವಜ, ಕೊಡವ ವಾಲಗ, ದಫ್ ಬ್ಯಾಂಡ್ ಸೆಟ್ ಮೆರುಗು ನೀಡಿದವು.