ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ನಾಗರಾಜು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡಿಗರಿಗೆ ಕನ್ನಡದಲ್ಲಿ ಸೇವೆ ಒದಗಿಸಲು ಅಗತ್ಯ ಮಾನವ ಸಂಪನ್ಮೂಲ ನಮ್ಮಲ್ಲಿ ಇದೆಯೇ ಎಂಬ ವಾದ-ವಿವಾದವಿದೆ. ಲಿಪಿ ಮತ್ತು ನುಡಿಯಲ್ಲಿರುವ ಕನ್ನಡ ಮತ್ತು ಕನ್ನಡದಲ್ಲಿನ ಜ್ಞಾನವನ್ನು ಡಿಜಿಟಲೀಕರಣ ಮಾಡಲು ಅಸಾಧ್ಯವಾದ ಮಾತಾಗಿದೆ. ಇಲ್ಲಿಯವರೆಗೆ ತಾಳೆಗರಿಯಿಂದ ಹಿಡಿದು ಅದಕ್ಕೆ ಸಂಪೂರ್ಣ ಮಾಹಿತಿಯನ್ನು ಹಸ್ತಾಂತರಿಸಲು ಕೃತಕ ಬುದ್ಧಿಮತ್ತೆಗೆ ಮಾತ್ರ ಸಾಧ್ಯವಾಗಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಕೃತಕ ಬುದ್ಧಿಮತ್ತೆಯಲ್ಲಿ ಕನ್ನಡ ಪಂಡಿತರಿಗೆ ಸಾಧ್ಯವಾಗದ ಅನೇಕ ಸಂಗತಿಗಳು ಹಾಗೂ ಕನ್ನಡ ನಾಗರಿಕತೆಯ ಬಗ್ಗೆ ಇನ್ನಷ್ಟು ಹೊಳಹು ಮೂಡಲು ಅಪಾರ ಅವಕಾಶಗಳಿವೆ. ಕನ್ನಡದ ಭವಿಷ್ಯ ಉಜ್ವಲವಾಗಬೇಕಾದರೆ ಎಲ್ಲರೂ ಕೈ ಜೋಡಿಸಬೇಕು, ಪ್ರಯತ್ನಶೀಲರಾಗಬೇಕಿದೆ ಎಂದರು.
ಮುಖ್ಯ ಭಾಷಣಕಾರ ದೊರೆಸ್ವಾಮಿ ಮದ್ದೂರು ಮಾತನಾಡಿ, ಜನಪದ ಸಾಹಿತ್ಯ, ಶ್ರೀ ಮಂಟೇಸ್ವಾಮಿ ಕಾವ್ಯಗಳು, ಮಹದೇಶ್ವರ ಕಾವ್ಯಗಳು ಭಾಷೆಗೆ ಪರಿಪೂರ್ಣ ಜ್ಞಾನವನ್ನು ಒದಗಿಸಿದೆ. ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕನ್ನಡ ಪ್ರಕೃತಿಯಂತೆಯೇ ಮಾರ್ಪಾಡುಗಳಿಗೆ ಒಳಗಾಗಿ ಅಸ್ತಿತ್ವ ಕಂಡುಕೊಂಡಿದೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಕನ್ನಡ ಕ್ಷಿಪ್ರಗತಿಯಲ್ಲಿ ನಾನಾ ಬಗೆಯ ರೂಪಾಂತರಗಳಿಗೆ ಒಳಗಾಗಿ ವಿಸ್ತಾರಗೊಂಡಿದೆ. ನಾವು, ನೀವು ಕನ್ನಡದ ಸಾಕ್ಷಿ ಪ್ರಜ್ಞೆಗಳಂತಿದ್ದ ಮಹನೀಯರನ್ನು ನೆನೆಯಬೇಕಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಜಯಲಕ್ಷ್ಮೀ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನಕಾರರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಕ್ರಿಯಾಶೀಲರಾಗಿ ಶಿಸ್ತು, ಸಮಯಪ್ರಜ್ಞೆಯನ್ನು ಬೆಳೆಸಿಕೊಂಡರೆ ಜೀವನದಲ್ಲಿ ಎತ್ತರಕ್ಕೆ ಸಾಗಲು ಅನುಕೂಲವಾಗಲಿದೆ ಎಂದರು. ಗ್ರಂಥಪಾಲಕ ಮಹದೇವಯ್ಯ, ಕನ್ನಡ ಭಾಷಾ ಉಪನ್ಯಾಸಕಿ ವಿಜಯಲಕ್ಷ್ಮೀ, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.