ಜಿಲ್ಲೆ

ಕನ್ನಡದ ಗೌರವ ಹೆಚ್ಚಿಸಿದ ಬಾನು ಮುಷ್ತಾಕ್

ಚಾಮರಾಜನಗರ : ಕನ್ನಡ ಸಾಹಿತ್ಯ ಲೋಕಕ್ಕೆ ವಿಶ್ವವಿಖ್ಯಾತ ಬುಕರ್ ಪ್ರಶಸ್ತಿಯನ್ನು ತಂದುಕೊಟ್ಟ ಬಾನು ಮುಷ್ತಾಕ್ ಕನ್ನಡದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಲೋಕಕ್ಕೆ ಬುಕರ್ ಪ್ರಶಸ್ತಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಥೆಗಾರ್ತಿ ಬಾನು ಮುಷ್ತಾಕ್ ಕನ್ನಡ ಭಾಷೆ, ಸಾಹಿತ್ಯದ ರಚನೆ ಹಾಗೂ ಸಾಮರಸ್ಯದ ಚಿಂತನೆಯ ಮೂಲಕ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದು ಕನ್ನಡಿಗರಿಗೆ ಸ್ಫೂರ್ತಿಯ ಸಂಕೇತವಾಗಿದೆ. ಕನ್ನಡಿಗರ ಸಾಹಿತ್ಯವು ಮತ್ತಷ್ಟು ವಿಶ್ವವಿಖ್ಯಾತಿಯನ್ನು ಪಡೆಯಲಿ. ಯುವಕರು ಮತ್ತು ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಪುಸ್ತಕಗಳ ರಚನೆಗೆ ಮುಂದಾಗಬೇಕಾಗಿದೆ ಎಂದರು. ಹಿರಿಯ ಕಲಾವಿದ ಹರದನಹಳ್ಳಿ ಘಟಂ ಕೃಷ್ಣ, ಕಸಾಪ ಸದಸ್ಯ ರವಿಚಂದ್ರ ಪ್ರಸಾದ್, ಬಿ.ಕೆ.ಆರಾಧ್ಯ, ಸರಸ್ವತಿ , ಶಿವಲಿಂಗ ಮೂರ್ತಿ, ಸುನಿತಾ, ಕೃಷ್ಣ ಇದ್ದರು.