ಚಿತ್ರದುರ್ಗ: ಪ್ರತಿ ವರ್ಷ ನವೆಂಬರ್ ಒಂದರಂದು ಕನ್ನಡಾಂಬೆ ಉತ್ಸವದೊಂದಿಗೆ ಭಾಷೆ ಹಿರಿಮೆ, ಗರಿಮೆ ಕುರಿತು ಭಾಷಣ ಮಾಡುವ ನಾವು, ಕನ್ನಡ ಉಳಿಸಲು ಏನು ಮಾಡುತ್ತಿದ್ದೇವೆ ಎಂದು ಪ್ರತಿಯೊಬ್ಬ ಕನ್ನಡಿಗನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳವಳಿ ಫಲವಾಗಿ ನಾವಿಂದು ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ರಾಷ್ಟ್ರೀಯ ನಾಯಕ ಎಸ್.ನಿಜಲಿಂಗಪ್ಪ ಸೇರಿದಂತೆ ಅನೇಕ ಮಹನೀಯರು ಏಕೀಕರಣ ಹೋರಾಟದಲ್ಲಿದ್ದರು ಎಂದು ತಿಳಿಸಿದರು.
ಮದಕರಿ ನಾಯಕರು, ವೀರ ವನಿತೆ ಒನಕೆ ಓಬವ್ವ ಕುರಿತು ಅಭಿಮಾನ ಪಡುವ ನಾವು, ಮೊದಲ ಕನ್ನಡ ಸಾಮ್ರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದ ನೆಲವೂ ದುರ್ಗ ಎಂಬುದನ್ನೂ ಅರಿಯಬೇಕಿದೆ. ಕದಂಬರ ಮಯೂರವರ್ಮ ಚಿತ್ರದುರ್ಗದ ಚಂದ್ರವಳ್ಳಿ ಧವಳಪ್ಪ ಗುಡ್ಡದಲ್ಲಿ ಸೈನ್ಯ ಕಟ್ಟಿದ್ದರ ಫಲವಾಗಿ, ಪಲ್ಲವರು ಮಯೂರ ವರ್ಮರಿಗೆ ಕಿರೀಟ ಧಾರಣೆ ಮಾಡಿದರು. ಇದರಿಂದಾಗಿ ಕನ್ನಡ ಸಾಮ್ರಾಜ್ಯ ಉದಯವಾಯಿತು ಎಂದು, ಕನ್ನಡಕ್ಕೆ ಚಿತ್ರದುರ್ಗ ನೀಡಿದ ಬಹು ದೊಡ್ಡ ಕೊಡುಗೆಯನ್ನು ಸ್ಮರಿಸಿದರು.
ಸಂಸದ ಗೋವಿಂದ ಎಂ.ಕಾರಜೋಳ, ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಎಂ. ಕಾರ್ತಿಕ್, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಆಯುಕ್ತೆ ಎಂ.ರೇಣುಕಾ, ಕಸಾಪ ಜಿಲ್ಲಾಧ್ಯಕ್ಷ ಶಿವಸ್ವಾಮಿ, ತಹಸೀಲ್ದಾರ್ ಡಾ.ನಾಗವೇಣಿ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಇದ್ದರು.
ನಗರದ ವಾಸವಿ, ಪಾರ್ಶ್ವನಾಥ ಹಾಗೂ ಡಿಎಸ್ ಹಳ್ಳಿ ಜ್ಞಾನಪೂರ್ಣ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‌್ಯಕ್ರಮ ಹಾಗೂ ಡಿ.ಒ. ಮುರಾರ್ಜಿ ತಂಡ ಗಾಯನ ಕಾರ‌್ಯಕ್ರಮ ನಡೆಸಿಕೊಟ್ಟಿತು.
ಮೆರವಣಿಗೆ
ನೀಲಕಂಠೇಶ್ವರ ದೇವಾಲಯದಿಂದ ಕವಾಯತು ಮೈದಾನ ವರೆಗೆ ಆಯೋಜಿಸಿದ್ದ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದ ಮೆ ರವಣಿಗೆಗೆ ಡಿಸಿ ಟಿ. ವೆಂಕಟೇಶ್ ಚಾಲನೆ ನೀಡಿದರು. ಕದಂಬರಾಜ ಮಯೂರ ವರ್ಮನ ಪುತ್ಥಳಿ ಜತೆಗೆ ವಿವಿಧ ಇಲಾಖೆಗಳ ಸ್ತಬ್ಧಚಿತ್ರ ಗಳು ಗಮನ ಸೆಳೆದವು.
ಸಾರಿಗೆ ಇಲಾಖೆ ರಸ್ತೆ ಸುರಕ್ಷತೆ, ಬ್ಯಾಟರಿ ಚಾಲಿತ ವಿದ್ಯುತ್ ವಾಹನಗಳ ಜಾಗೃತಿ ಸ್ತಬ್ಧಚಿತ್ರ(ಪ್ರ), ತೋಟಗಾರಿಕೆ (ದ್ವಿ)ಹಾಗೂ ಕೆಎಸ್ ಆರ್‌ಟಿಸಿ(ತೃ) ಶಿಕ್ಷಣ ಹಾಗೂ ಕೃಷಿ ಇಲಾಖೆ ಸ್ತಬ್ಧಚಿತ್ರಗಳು ಸಮಾಧಾನಕರ ಬಹುಮಾನ ಪಡೆದವು.
ಸೇವಾದಳ, ಶಾಲಾ ಮಕ್ಕಳ ವಾದ್ಯತಂಡ, ಗೊಂಬೆ ಹಾಗೂ ಪಟ ಕುಣಿತ, ಡೊಳ್ಳು, ವೇಷಗಾರ, ಬ್ಯಾಂಡ್ ಸೇರಿದಂತೆ ಕಲಾ ತಂಡಗಳು ಮೆರುಗು ನೀಡಿದವು. ಮಹಾತ್ಮ ಗಾಂಧಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಓಬವ್ವ ವೃತ್ತಗಳ ಮೂಲಕ ಮೆರವಣಿಗೆ ಕವಾಯತು ಮೈದಾನ ತಲುಪಿತು.
ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ
ಡಿಸಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸಚಿವ ಡಿ.ಸುಧಾಕರ್ ಶುಕ್ರವಾರ ಅನಾವರಣಗೊಳಿಸಿದರು. ಬೇಲೂರು ತಾಲೂಕಿನ ಹಲ್ಮಿಡಿಯಲ್ಲಿ 1936ರಲ್ಲಿ ಪತ್ತೆಯಾದ ಶಾಸನವು ಕನ್ನಡ ಲಿಪಿಯಲ್ಲಿ ಲಭ್ಯವಾದ ಮೊಟ್ಟ ಮೊದಲ ಶಾಸನವಾಗಿದ್ದು, ಅದರ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಈ ಶಾಸನದ ಪ್ರತಿಕೃತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ಥಾಪಿಸಲಾಗಿದೆ.
28 ಸಾಧಕರಿಗೆ ಪ್ರಶಸ್ತಿ ಪ್ರದಾನ
ಗುರುಮೂರ್ತಿ, ಡಿ.ನಾಗರಾಜ್, ಸಿ.ಎನ್.ವೆಂಕಟೇಶ್, ಹನುಮಂತಪ್ಪ ಪೂಜಾರ್, ಇಂದ್ರಮ್ಮ, ಒ. ಮೂರ್ತಿ, ಡಾ.ಬಿ.ಸಿ. ಅನಂತರಾಮು, ಪ್ರೊ.ಎಂ.ಜಿ. ರಂಗಸ್ವಾಮಿ, ಡಾ.ನವೀನ್ ಬಸವರಾಜ್ ಸಜ್ಜನ್, ಡಿ.ಸಿ. ಪಾಣಿ, ಎಸ್.ಪ್ಲೋಮಿನ್‌ದಾಸ್, ಸಿದ್ದವನಹಳ್ಳಿ ವೀರೇಶ್ ಕುಮಾರ್, ಎಂ.ಜಿ. ವೇದಾಂತ್, ಚಂದ್ರಶೇಖರಪ್ಪ ಗುಂಡೇರಿ, ಪೈಲ್ವಾನ್‌ಆಫೀಜ್ ಆರ್.ವೆಂಕಟೇಶರೆಡ್ಡಿ, ಡಿ.ನಾಗರಾಜ್, ವೈ.ವಿ.ಮಹೇಂದ್ರನಾಥ್, ಇ.ಅಶೋಕ್ ಕುಮಾರ್, ಎಂ.ಕೃಷ್ಣಮೂರ್ತಿ, ಕಿರಣ್‌ಕುಮಾರ್ ಎಲ್. ತೊಡರನಾಳ್,ತಿಪ್ಪೇಸ್ವಾಮಿ ನಾಕೀಕೆರೆ, ರಾಜಶೇಖರ್, ಹರಿಯಬ್ಬೆ ಸಿ.ಹೆಂಜಾರಪ್ಪ, ಇ.ಎನ್.ಲಕ್ಷ್ಮೀಕಾಂತ್, ಬಿ.ಮೋಹಿದ್ದಿನ್ ಖಾನ್, ಕೆ.ಆರ್.ದಯಾನಂದ್, ಬಡಿಗಿರಂಗಪ್ಪ ಮತ್ತಿತರ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಚಿವ ಸುಧಾಕರ್, ಸಂಸದ ಗೋವಿಂದ ಎಂ. ಕಾರಜೋಳ ಮತ್ತಿತರರು ಇದ್ದರು.