ಮೈಸೂರು: ಶರಣರ ಆದರ್ಶದ ಬದುಕು ನಮ್ಮದಾಗಬೇಕು ಎಂದು ಸಾಹಿತಿ ನಗರ್ಲೆ ಶಿವಕುಮಾರ ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ನಗರದ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಏರ್ಪಡಿಸಿದ್ದ 327ನೇ ಶಿವಾನುಭವ ದಾಸೋಹ ಕಾರ್ಯಕ್ರಮದಲ್ಲಿ ‘ಶರಣರ ವಿಚಾರಧಾರೆ’ ಕುರಿತು ಮಾತನಾಡಿದರು.
12ನೇ ಶತಮಾನದ ಬಸವಾದಿ ಶರಣರನ್ನು ಕುರಿತು ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ಷಡಕ್ಷರ ಕವಿ ಸೇರಿದಂತೆ ಮೊದಲಾದ ಕವಿಗಳು ಕಾವ್ಯ ರಚಿಸಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಬೆಳಕಿಗೆ ಬರಲಿಲ್ಲ.
15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲಕ್ಕೆ 101 ವಿರಕ್ತರು ಅಂದಿಗೆ ದೊರೆತ ವಚನಗಳನ್ನು ಪ್ರಕಟಪಡಿಸಿದರು. 16ನೇ ಶತಮಾನದಲ್ಲಿ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮೀಜಿ ಕಾಲದಲ್ಲಿ ವಚನ ಸಾಹಿತ್ಯದ ದ್ವಿತೀಯ ಘಟ್ಟ ಆರಂಭವಾಯಿತು. ಅದಾದ ನಂತರ 20ನೇ ಶತಮಾನದ ಆದಿಭಾಗದಲ್ಲಿ ಡಾ.ಫ.ಗು.ಹಳಕಟ್ಟಿ ಅವರು ಶಿವಾನುಭವ ಪತ್ರಿಕೆ ಮೂಲಕ ವಚನಗಳನ್ನು ಪ್ರಕಟಿಸಿದರು ಎಂದು ತಿಳಿಸಿದರು.
250ಕ್ಕೂ ಹೆಚ್ಚು ವಚನಕಾರರು 22,000ಕ್ಕಿಂತಲೂ ಹೆಚ್ಚಿನ ವಚನ ರಚಿಸಿರುವುದನ್ನು ಹಾಗೂ ಇವೆಲ್ಲವುಗಳನ್ನು ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಿರುವುದನ್ನು ಸ್ಮರಿಸಬಹುದಾಗಿದೆ. ಕನ್ನಡ ಸಾಹಿತ್ಯಕ್ಕೆ ವಚನದ ಸಾಹಿತ್ಯದ ಕೊಡುಗೆ ಅಪಾರ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದು ವಚನ ಸಾಹಿತ್ಯದ ಬಳುವಳಿ ಎನ್ನಬಹುದು ಎಂದರು.
ಕಾಯಕ ಮತ್ತು ದಾಸೋಹಕ್ಕೆ ಮಹತ್ವವನ್ನು ಕೊಟ್ಟ ಬಸವಾದಿ ಶರಣರು ನುಡಿದಂತೆ ನಡೆದು ತೋರಿಸಿದರು. ಮೋಳಿಗೆ ಮಾರಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ, ನಗೆಯ ಮಾರಿತಂದೆ, ಮೇದರ ಕೇತಯ್ಯ, ಮಡಿವಾಳ ಮಾಚಯ್ಯ ಹೀಗೆ ವಿವಿಧ ಶರಣರ ವಿಚಾರ ತಿಳಿಸಿ, ಹಲವು ವಚನಗಳನ್ನು ಉಲ್ಲೇಖಿಸಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ.ಬಿ.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಚೂಡಾಮಣಿ ಮತ್ತು ನಟರಾಜು ವಚನ ಗಾಯನ ನಡೆಸಿಕೊಟ್ಟರು.