ಕಲಬುರಗಿ: ಕನ್ನಡ ಭಾಷೆ ಬೆಳವಣಿಗೆ ಮತ್ತು ವೈವಿಧ್ಯತೆಗೆ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರ. ಸಾಹಿತ್ಯ ಮತ್ತು ಗೀತೆಗಳ ಮೂಲಕ ಕನ್ನಡದ ಭಾವನೆಗಳ ಜತೆಗೆ ಮನಸ್ಸುಗಳು ಬೆರೆತು ಭಾಷಾ ಸಮೃದ್ಧಿಯಾಗಿದೆ ಎಂದು ಗುವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.
ಗುಲ್ಬರ್ಗ ವಿವಿ ಕಾರ್ಯಸೌಧದ ಮಂಭಾಗದಲ್ಲಿ ಕರ್ನಾಟಕ ಸಂಭ್ರಮ-೫೦ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಡಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿ ಪರಿಸರ ಸಂಪನ್ಮೂಲಗಳು ಎಲ್ಲೆಡೆ ಸಮೃದ್ಧಿಯಾಗಿದ್ದು, ಅದನ್ನು ಸಂರಕ್ಷಿಸಬೇಕಿದೆ ಎಂದರು.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರು ಇರು ಎಂತಾದರು ಇರು,ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತೋ ಕನ್ನಡದ ದೀಪ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ' ಗೀತೆಗಳನ್ನು ಡಾ.ಲಕ್ಷಿ ಶಂಕರ ಜೋಷಿ ಮತ್ತು ಸಂಗಡಿಗರು ಪ್ರಸ್ತುತಪಡಿಸಿದರು.
ಕುಲಸಚಿವ ಡಾ.ಬಿ.ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ.ಜ್ಯೋತಿ ಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ.ರಾಜನಾಳ್ಕರ ಲಕ್ಷಣ, ಪ್ರಮುಖರಾದ ಪ್ರೊ.ಬಿ.ವಿಜಯ, ಪ್ರೊ.ದೇವಿದಾಸ ಮಾಲೆ, ಪ್ರೊ.ಬಸವರಾಜ ಸಣ್ಣಕ್ಕಿ, ಪ್ರೊ.ಎಚ್.ಟಿ.ಪೋತೆ, ಪರಿಮಳ ಅಂಬೇಕರ್, ಎಸ್.ಎನ್.ಗಾಯಕವಾಡ, ಟಿ.ಶಂಕ್ರಪ್ಪ, ವಿ.ಎಂ.ಜಾಲಿ, ಡಾ ನಿಂಗಣ್ಣ ಇತರರಿದ್ದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಕೆ.ಲಿಂಗಪ್ಪ ಸ್ವಾಗತಿಸಿ, ನಿರೂಪಣೆ ಮಾಡಿದರು. ಎನ್. ಜಿ. ಕಣ್ಣೂರು ವಂದಿಸಿದರು.