ಜಿಲ್ಲೆ

ಕನ್ನಡಕ್ಕೆ ಅವಮಾನ ಖಂಡಿಸಿ ಕರವೇ ಪ್ರತಿಭಟನೆ

ಬೆಳಗಾವಿ: ನಗರದಲ್ಲಿ ಈಚೆಗೆ ಜರುಗಿದ ಈದ್ ಮಿಲಾದ್ ಮೆರವಣಿಗೆ ಬ್ಯಾನರ್, ನಾಮಫಲಕಗಳಲ್ಲಿ ಕನ್ನಡ ಅವಮಾನಿಸಿ ಅನ್ಯಭಾಷೆ ಬಳಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಪ್ರತಿಭಟಿಸಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ ಕನ್ನಡ ಅನುಷ್ಠಾನಕ್ಕಾಗಿ ನಿರಂತರ ಶ್ರಮಿಸುತ್ತಿದ್ದು, ಸಾಕಷ್ಟು ಕಾರ್ಯಕ್ರಮ ರೂಪಿಸಿ ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡುತ್ತಿದೆ. ಆದರೆ, ಬೆಳಗಾವಿ ನಗರದಲ್ಲಿ ಮರಾಠಿ, ಉರ್ದು, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಸಿಗುವಷ್ಟು ಆದ್ಯತೆ ಕನ್ನಡ ಭಾಷೆಗೆ ಸಿಗುತ್ತಿಲ್ಲ. ಕನ್ನಡ ಕಡೆಗಣಿಸುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಕನ್ನಡ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅನ್ಯ ಭಾಷಿಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸೆ.14ರಂದು ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಶುಭಾಶಯ ಕೋರಿ ಹಾಕಿರುವ ನಾಮಫಲಕಗಳಲ್ಲಿ ಕನ್ನಡ ಕಾಣೆಯಾಗಿತ್ತು, ಇಂಗ್ಲಿಷ್, ಉರ್ದು ಭಾಷೆಗಳೇ ರಾರಾಜಿಸಿದ್ದವು. ನಗರದಲ್ಲಿ ಮೇಲಿಂದ ಮೇಲೆ ಕನ್ನಡವನ್ನು ಅವಮಾನಿಸುವ ಘಟನೆಗಳು ನಡೆದರೂ ಪಾಲಿಕೆ ಅಧಿಕಾರಿಗಳು ಕ್ರಮವಹಿಸಿಲ್ಲ. ಕನ್ನಡ ವಿರೋಧಿಗಳ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು. ಕನ್ನಡ ಅನುಷ್ಠಾನ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಗಣೇಶ ರೋಕಡೆ, ಬಾಳು ಜಡಗಿ, ರಾಜು ನಾಶಿಪುಡಿ ಇತರರಿದ್ದರು.