ಜಿಲ್ಲೆ

ಕನ್ನಡಕ್ಕಿದೆ ಶ್ರೇಷ್ಠ ಸ್ಥಾನಮಾನ: ಶಿವಮೊಗ್ಗ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಮಾನ್ಯಾ

ಆಯನೂರು: ನಮ್ಮ ಮಾತೃ ಭಾಷೆ ಕನ್ನಡಕ್ಕೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಆ ಸ್ಥಾನವನ್ನು ನಾವು ಹಾಳು ಮಾಡುತ್ತಿದ್ದೇವೆ. ನಮ್ಮ ಭಾಷೆಗೆ ನಾವೇ ಗೌರವ ಕೊಡದಿದ್ದರೆ ಹೇಗೆ? ಎಲ್ಲದರೂ ಇರು, ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ಕನ್ನಡವನ್ನು ಉಳಿಸಿ ಬೆಳೆಸಿ ಎಂದು ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ನಿಸರಾಣಿಯ ಮಾನ್ಯಾ ಹೇಳಿದರು.

ಗುರುವಾರ ಗಿರಿದೀಪಂ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿ ವೇದಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಮೊಗ್ಗ ಜಿಲ್ಲಾ 17ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಕನ್ನಡ ನಾಡು ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಭವ್ಯ ಪರಂಪರೆಯಿಂದ ಕೂಡಿದೆ. 2500 ವರ್ಷಗಳ ಇತಿಹಾಸವಿರುವ ಕನ್ನಡದ ಘನತೆ, ಗೌರವ ಉಳಿಸುವುದು ನಮ್ಮ ಕರ್ತವ್ಯ. ಸುಲಿದ ಬಾಳೆ ಹಣ್ಣಿನಂದದಿ, ಕಳಿದ ಸಿಗುರಿನ ಕಬ್ಬಿನಂದದಿ, ಅಳಿದುಷ್ಣದ ಹಾಲಿನಂದದಿ, ಸುಲಭವಾಗಿರ್ಪ ನಮ್ಮ ಕನ್ನಡ ಭಾಷೆಯನ್ನು ಕವಿವಾಣಿಯಂತೆ ನಾವು ಅಳಿಯದಂತೆ ಉಳಿಸಿ ಬೆಳೆಸಬೇಕಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿಯೇ ರಾಷ್ಟ್ರಕವಿ ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಯು.ಆರ್.ಅನಂತಮೂರ್ತಿ, ನಾ ಡಿಸೋಜ, ಪೂರ್ಣಚಂದ್ರ ತೇಜಸ್ವಿ ಅವರಂತಹ ಮಹಾನ್ ಸಾಹಿತಿಗಳಿಗೆ ಜನ್ಮವಿತ್ತಿದ್ದಾರೆ. ಡೊಳ್ಳು ಕುಣಿತ, ಜಾನಪದ ನೃತ್ಯ, ಕೋಲಾಟ, ಯಕ್ಷಗಾನ, ವೀರಗಾಸೆ, ಕಂಸಾಳೆಯಂತಹ ಸಾಂಸ್ಕೃತಿಕ ತಾಣವಾಗಿದೆ. ಗಮಕ ಶಾಸ್ತ್ರದ ಪರಿಣಿತ ಹೊಸಬಾಳೆಯ ಸೀತಾರಾಂ, ನಾಟಕಕಾರ ಶಾಂತಕುಮಾರ ಮುಡಗೋಡು, ರಾಮಚಂದ್ರಾಪುರದಲ್ಲಿ ದಂತಿ ಸಿಂಹಾಸನ ಕೆತ್ತಿದ, ಮೈಸೂರು ಅರಮನೆಯ ದ್ವಾರಬಾಗಿಲು, ವಿಧಾನಸೌಧ ಪೀಠದ ಶಿಲ್ಪಿ ಗುಡಿಗಾರ ಹಿರಣ್ಯಪ್ಪ ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಹೀಗೆ ಸಾಗರದ ಜೋಗದ ಫಾಲ್ಸ್, ಶಿಕಾರಿಪುರದ ಅಕ್ಕಮಹಾದೇವಿ, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ತೀರ್ಥಹಳ್ಳಿಯ ಕವಿಶೈಲ ಅವಿಸ್ಮರಣೀಯವಾಗಿದೆ ಎಂದರು.

ಪಾಲಕರು ಮಕ್ಕಳು ಆಂಗ್ಲ ಮಾಧ್ಯಮದಲ್ಲಿಯೇ ಓದಬೇಕು ಎನ್ನುವ ಜತೆಗೆ ಹೆಚ್ಚು ಅಂಕ ಪಡೆಯಲಿ ಎಂದು ಹಂಬಲಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಾರೆ. ಆಂಗ್ಲ ಮಾಧ್ಯಮ ಬೇಡ ಎನ್ನುವುದಿಲ್ಲ. ಆದರೆ ಸರ್ಕಾರಿ ಶಾಲೆಯ ಶಿಕ್ಷಣ ಯಾವುದಕ್ಕೂ ಕಡಿಮೆ ಇಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿ ಆಂಗ್ಲ ಮಾಧ್ಯಮದಲ್ಲಿ ಓದಿದ ಮಗು ಕನ್ನಡ ಓದಲು ಬರೆಯಲು ಕಷ್ಟ ಪಡುತ್ತದೆ. ಹೀಗಾಗಿ ಮಕ್ಕಳ ಕನಸುಗಳು ನನಸಾಗಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿರಿ. ಪುಸ್ತಕ ಹಾಗೂ ಪತ್ರಿಕೆಯನ್ನು ಓದುವಂತೆ ಪ್ರೇರೇಪಿಸಿ. ಆಗ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸಾಧಕ ಸಿಗುತ್ತಾನೆ.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಈ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಶಿಕ್ಷಣದ ಬಗ್ಗೆ ಹಿಂಜರಿಕೆ ಯಾಕೆ? ಉಚಿತವಾಗಿ ನೀಡುವ ಶಿಕ್ಷಣದ ಬಗ್ಗೆ, ಸರ್ಕಾರದ ಸೌಲಭ್ಯದ ಬಗ್ಗೆ ಪಾಲಕರು ಅರ್ಥ ಮಾಡಿಕೊಳ್ಳಬೇಕು. ಸರ್ಕಾರವೂ ಶಾಲೆಗಳಲ್ಲಿರುವ ಸಮಸ್ಯೆಗಳನ್ನು ಹಾಗೂ ವ್ಯವಸ್ಥೆಯನ್ನು ಸರಿಪಡಿಸಿಕೊಂಡು ಉತ್ತಮ ಶಿಕ್ಷಣ ನೀಡಬೇಕಾಗಿದೆ ಎಂದು ಹೇಳಿದರು.

ಬನದಕೊಪ್ಪ ಅಂಗನವಾಡಿ ಕೇಂದ್ರದಿಂದ ನನ್ನ ವಿಧ್ಯಾಭ್ಯಾಸ ಆರಂಭ. ಮೊದಲ ಅಕ್ಷರ ಕಲಿಸಿದ ಗುರು ಪ್ರೇಮಾ ಶಿಕ್ಷಕಿ. ನನ್ನ ಕಲಿಕೆಯಲ್ಲವೂ ಕನ್ನಡ ಮಾಧ್ಯಮದಲ್ಲಿ, ಅದರಲ್ಲೂ ಸರ್ಕಾರಿ ಶಾಲೆಯಲ್ಲಿಯೇ. ಶಿಕ್ಷಕರಾದ ಮಂಗಳಮೂರ್ತಿ ನನ್ನನ್ನು ದತ್ತು ಪುತ್ರಿಯನ್ನಾಗಿ ಪಡೆದು ಓದಿಸುತ್ತಿದ್ದಾರೆ. ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಮನೆಯ ಕಟ್ಟೆಯಲ್ಲಿ ಕುಳಿತು ಮುಸ್ಸಂಜೆಯ ಸವಿಯನ್ನು ಸವಿಯುತ್ತ ಬರೆದ ಕವಿತೆಯ ಪ್ರಭಾವ ನನ್ನನ್ನು ಈ ಮಟ್ಟಕ್ಕೆ ಕೆರೆತಂದಿದೆ. ಪುಟ್ಟ ಗ್ರಾಮದ ಪ್ರತಿಭೆಯನ್ನು ಗುರುತಿಸಿದ ಎಲ್ಲರಿಗೂ ಚಿರರುಣಿ ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ಕವಿ ವಿನಯ್ ಜಿ.ಎನ್.ಕೊಡಸೆ ಮಾತನಾಡಿ, ಜನರಲ್ಲಿ ಸಂಬಂಧಗಳು ನಶಿಸುತ್ತಿವೆ. ಆದರೆ ಸಾಹಿತ್ಯದಲ್ಲಿ ಪ್ರೀತಿ- ಸಂಬಂಧ ಅಡಗಿದೆ. ಕನ್ನಡದಲ್ಲಿ ಸ್ಪಷ್ಟತೆ ಇದೆ. ಇಂಗ್ಲಿಷ್ ಹಲವು ಗೊಂದಲದಿಂದ ಕೂಡಿದೆ ಎಂದರು.

ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಜಾಗತೀಕರಣದಿಂದ ನಾಗರಿಕತೆ ನಶಿಸುತ್ತಿದೆ. ಇಂದು ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ ಎಂದರು.

ನಾಗಮಂಗಲದಲ್ಲಿ ರಾಜ್ಯಮಟ್ಟದ ಸಮ್ಮೇಳನ: ಶಿವಮೊಗ್ಗ, ಸೊರಬ, ಹೊಸನಗರ, ತೀರ್ಥಹಳ್ಳಿ, ಸಾಗರ, ಭದ್ರಾವತಿ, ಶಿಕಾರಿಪುರ ಹೀಗೆ ಪ್ರತಿ ತಾಲೂಕುಗಳಲ್ಲಿ ಸಮ್ಮೇಳನ ನಡೆಸಿ ಜಿಲ್ಲಾಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ. ಮಂಡ್ಯದ ನಾಗಮಂಗಲದಲ್ಲಿ ರಾಜ್ಯಮಟ್ಟದ ಸಾಹಿತ್ಯ ಸಮ್ಮೆಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು. ಮಕ್ಕಳು ಪಠ್ಯದ ಜತೆಗೆ ಪುಸ್ತಕ ಹಾಗೂ ಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗೋಷ್ಠಿಗಳಲ್ಲಿ ಮಕ್ಕಳ ಕಲರವ: ಸಮ್ಮೇಳನದಲ್ಲಿ ಕಾವ್ಯ ಕಲರವ, ಕಥಾಗೋಷ್ಠಿ ಹಾಗೂ ಪ್ರಬಂಧ ಗೋಷ್ಠಿಗಳು ಜರುಗಿದವು. ಕಾವ್ಯ ಕಲರವದ ಅಧ್ಯಕ್ಷತೆಯನ್ನು ತೀರ್ಥಹಳ್ಳಿಯ ಚಿರಾಗ್ ಪಟವರ್ಧನ್, ಕಥಾಗೋಷ್ಠಿಯ ಅಧ್ಯಕ್ಷತೆ ಸಾಗರದ ಪಿ.ರಕ್ಷಿತಾ ಹಾಗೂ ಪ್ರಬಂಧ ಗೋಷ್ಠಿಯ ಅಧ್ಯಕ್ಷತೆಯನ್ನು ಸೊರಬದ ಪಿ.ಹರ್ಷಾ ವಹಿಸಿದ್ದರು. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಆನವೇರಿ, ಸೊರಬ, ಆನವಟ್ಟಿ, ನಗರ, ಚಿಕ್ಕಜೇನಿ, ಕುಂಸಿ, ಕೊಮ್ಮನಾಳ್, ಹುಂಚ, ಆಗುಂಬೆ, ಸಾಗರ, ಬೆಜ್ಜವಳ್ಳಿ, ಯಡೂರು ಇನ್ನೂ ಹಲವು ಗ್ರಾಮಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಪಾಲಕರು, ಸಾಹಿತ್ಯ ಷರಿಷತ್ ಸದಸ್ಯರು ಬಂದಿದ್ದರು.